ಇದು ಹಾಲಿ ಚಾಂಪಿಯನ್ಸ್ ಗೆ ತಕ್ಕುದಾದ ಆಟ! ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಅಧಿಕಾರಯುತ ಜಯ ಸಾಧಿಸಿದೆ. ಈ ಮೂಲಕ ಆಢಿದ 5 ಪಂದ್ಯಗಳಲ್ಲಿ 4 ಜಯ ಗಳಿಸಿರುವ ರಜತ ಪಾಟೀದಾರ್ ಬಳಗವು 8 ಅಂಕಗಳನ್ನು ಸಂಪಾದಿಸಿದೆ. ಜೊತಗೆ ಅತ್ಯುನ್ನತ ರನ್ ರೇಟ್(1.503) ಆಧಾರದಲ್ಲಿ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15ರ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡವು ಇನ್ನೂ 29 ಎಸತೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು.ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿರಾಟ್ ಐಪಿಎಲ್ ನಲ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರು ಆರ್ ಸಿಬಿಗೆ ಅಗತ್ಯವಿದ್ದ ಇನ್ನಿಂಗ್ಸ್ ಕಟ್ಟಿದರು. ಉತ್ತಮ ಲಯದಲ್ಲಿದ್ದ ಅವರು ಆವೇಶ್ ಖಾನ್ ಬೌಲಿಂಗ್ ನಲ್ಲಿ ಎಡವಿ ಕೇವಲ 1 ರನ್ ನಿಂದ ಅರ್ಧಶತಕ ತಪ್ಪಿಸಿಕೊಂಡರು. ಔಟಾಗುವ ಮೊದಲು ಅವರು 34 ಎಸೆತಗಳಿಂದ 6 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 49 ರನ್ ಗಳಿದ್ದರು. ಉಳಿದಂತೆ ನಾಯಕ ರಜತ್ ಪಾಟೀದಾರ್(13 ಎಸೆತದಿಂದ 27 ರನ್), ಜಿತೇಶ್ ಶರ್ಮಾ(9 ಎಸೆತದಲ್ಲಿ 23) ಅವರು ಬಿರುಸಿನ ಆಟವಾಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಲಖನೌ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿಯ ರಸಿಕ್ ಸಲಾಂ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ದಾಳಿಗೆ ತತ್ತರಿಸಿ ಕಡಿಮೆ ಮೊತ್ತಕ್ಕೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್(32 ಎಸೆತದಲ್ಲಿ 40), ಆಯುಷ್ ಬದೋನಿ (24 ಎಸೆತದಲ್ಲಿ 38), ಮುಕುಲ್ ಚೌಧರಿ(28 ಎಸೆತದಲ್ಲಿ 39) ಉತ್ತಮ ಆಟ ಪ್ರದರ್ಶಿಸಿದರೂ ಉಳಿದ ಅಗ್ರ ಕ್ರಮಾಂಕ ಕುಸಿದಿದ್ದರಿಂದ ತಂಡದ ಮೊತ್ತ 150 ಸಹ ದಾಟಲಿಲ್ಲ. ಬಿರುಸಿನ ದಾಳಿ ನಡೆಸಿ ಲಖನೌ ಬ್ಯಾಟರ್ ಗಳನ್ನು ಕಾಡಿದ ಜೋಶ್ ಹೇಜಲ್ವುಡ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕಿತು.
ಎಲ್ಎಸ್ಜಿ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೇರಿದ ಆರ್ಸಿಬಿ



