ಇದಕ್ಕೇ ಹೇಳುವುದು ಐಪಿಎಲ್ ಎಂದರೆ ಅಚ್ಚರಿಗಳ ಮೂಟೆ ಎಂದು! ಸೀಸನ್ ನಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ನೀಡಿದ್ದು ಸನ್ ರೈಸರ್ಸ್ ತಂಡದ ಪರವಾಗಿ ಪದಾರ್ಪಣೆ ಪಂದ್ಯವನ್ನಾಡಿದ ಅಬ್ಬಾ ಪ್ರಫುಲ್ ಕುಮಾರ್ ಹಿಂಗೆ(34ಕ್ಕೆ 4) ಮತ್ತು ಸಕಿಬ್ ಹುಸೇನ್(24ಕ್ಕೆ 2)! ಇಬ್ಬರು ಮಧ್ಯಮವೇಗಿಗಳ ಬಿಗು ದಾಳಿಗೆ ನಿರುತ್ತರವಾದ ರಿಯಾನ್ ಪರಾಗ್ ಬಳಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಂದೆ 57 ರನ್ ಗಳ ಸೋಲೊಪ್ಪಿಕೊಂಡಿತು.
ಈ ಗೆಲುವಿನ ಮೂಲಕ ಆಡಿರುವ 5 ರಪದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲಿನೊಂದಿಗೆ 4 ಅಂಕ ಸಂಪಾದಿಸಿರುವ ಸನ್ ರೈಸರ್ಸ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಸೀಸನ್ ನಲ್ಲಿ ಮೊದಲ ಸೋಲಾಗಿದ್ದರೂ 5 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕ ಹೊಂದಿರುವ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏಪ್ರಿಲ್ 13ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ 19 ಓವರ್ ಗಳಲ್ಲಿ 159 ರನ್ ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯದಲ್ಲೇ 4 ವಿಕೆಟ್ ಪಡೆದ ಪ್ರಫುಲ್ ಕುಮಾರ್ ಹಿಂಗೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೊದಲ ಓವರ್ ನಲ್ಲೇ ಹೊಡೆತ ನೀಡಿದ್ದು ಪ್ರಫುಲ್ ಹಿಂಗೆ. ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್ ಮತ್ತು ಲೌನ್ ಡ್ರೆ ಪ್ರೆಟೋರಿಯಸ್ ಅವರನ್ನು ಓವರ್ ಮುಗಿಯುವುದರೊಳಗೆ ಪೆವಿಲಿಯನ್ ಗೆ ಅಟ್ಟಿದ್ದು ರಾಜಸ್ಥಾನ ರಾಯಲ್ಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅಂದರೆ ರಾಜಸ್ಥಾನ ರಾಯಲ್ಸ್ 1 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಇಷ್ಟೂ ಸಾಲದೆಂಬಂತೆ 2ನೇ ಓವರ್ ನಲ್ಲಿ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಅನ್ನೂ ಕಿತ್ತ ಸಕಿಬ್ ಹುಸ್ಸೇನ್ ಅದಾಗಲೇ ರಾಜಸ್ಥಾನ ರಾಯಲ್ಸ್ ಗೆ ಆಗಿದ್ದ ಗಾಯದ ಮೇಲೆ ಬರೆ ಎಳೆದರು. ಅಲ್ಲಿಗೆ
ತಂಡ 2 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಂತಾಯಿತು. ಇದು ಇಲ್ಲಿಗೇ ನಿಲ್ಲಲಿಲ್ಲ. 3ನೇ ಓವರ್ ಎಸೆದ ಪ್ರಫುಲ್ ಹಿಂಗೆ ನಾಯಕ ರಿಯಾನ್ ಪರಾಗ್ ಅವರನ್ನೂ ಔಟ್ ಮಾಡಿದರು. ಸಕಿಬ್ ಹುಸೇನ್ ಕಮಾಲ್ 15ನೇ ಓವರ್ ನಲ್ಲಿ ಮತ್ತೆ ದಾಳಿಗೆ ಇಳಿದ ಸಕಿಬ್ ಹುಸೇನ್ ಅವರು ಸೆಟ್ ಆಗಿದ್ದ ಫೆರೇರಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂದಿನ ಓವರ್ ನಲ್ಲೇ ಇಶಾನ್ ಮಾಲಿಂಗ ಅವರು ರವೀಂದ್ರ ಜಡೇಜಾ ಅವರನ್ನು ಪೆವಿಲಿಯನ್ ಗೆ ಅಟ್ಟಿದರು. ಅಲ್ಲಿಗೆ ರಾಜಸ್ಥಾನ ತಂಡದ ಹೋರಾಟ ಮುಗಿಯಿತು. ಅಂತಿಮ ಹಂತದಲ್ಲಿ ತುಷಾರ್ ದೇಶಪಾಂಡೆ(11 ಎಸೆತದಲ್ಲಿ 25) ಗುಡುಗಿದರೂ ಪ್ರಯೋಜನ ಆಗಲಿಲ್ಲ.
ಪ್ರಫುಲ್, ಸಕಿಬ್ ದಾಳಿಗೆ ಸಿಲುಕಿ ಹೆಂಗೆಂಗೋ ಆಡಿದ ಆರ್. ಆರ್ !



