ಚಿಕ್ಕಬಳ್ಳಾಪುರ : ಹೆಚ್.ಎನ್. ವ್ಯಾಲಿ ನೀರಿನ ಕಾರಣವಾಗಿ ಜನತೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವಾಗಲೂ ಶುದ್ಧನೀರಿಗಾಗಿ ಆಗ್ರಹಿಸದಿರುವುದು ನಾಗರೀಕರಿಗೆ ಶೋಭೆ ತರುವುದಿಲ್ಲ. ಹೀಗಾಗಿ ಲಕ್ಷ ಸಹಿ ಅಭಿಯಾನದ ಮೂಲಕ ರಾಷ್ಟ್ರಪತಿಗಳ ಗಮನ ಸೆಳೆಯುವ ಕೆಲಸ ಮಾಡಲಾಗಿದೆ ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಂದೀಪ್.ಬಿ ರೆಡ್ಡಿ ಹೇಳಿದರು.ನಗರದ ಕಂದವಾರ ಕೆರೆಯ ದಂಡೆಯಲ್ಲಿ ಶುಕ್ರವಾರ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶುದ್ಧನೀರಿಗಾಗಿ ಲಕ್ಷ ಸಹಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಾಂಧಾರಿ ಮಗನಿಗೆ ಹೇಳುವ ಮಾತು ಯಥೋಧರ್ಮಸ್ಯ ತಥಾ ಜಯಃ ಎಂಬ ಮಾತಿನಂತೆ ನಮ್ಮ ಹೋರಾಟಕ್ಕೆ ಜಯವಾಗಲಿದೆ.ಶುದ್ಧನೀರು ಕ್ಷೇತ್ರದಲ್ಲಿ ಹರಿದೇ ಹರಿಯಲಿದೆ.ಇಡೀ ದೇಶದಲ್ಲಿ ಕೊಳಚೆ ನೀರನ್ನು ಹರಿಸಿರುವ ಏಕೈಕ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆ.ಇದಕ್ಕೆ ಕಡಿವಾಣ ಹಾಕುವ ಸಂದರ್ಭ ಬಂದಿದೆ.ಶುದ್ಧನೀರು ಪಡೆಯುವುದು ನಮ್ಮ ಜನ್ಮಸಿದ್ಧ ಹಕ್ಕು ಎಂಬoತೆ ಜನತೆ ಎಚ್ಚೆತ್ತಿದ್ದಾರೆ ಎಂದು ಗುಡುಗಿದರು.
ಜವಾಬ್ದಾರಿಯುತ ನಾಗರೀಕನಾಗಿ ಜಿಲ್ಲೆಯ ಜನತೆ ದಶಕಗಳಿಂದ ಶುದ್ಧಕುಡಿಯುವ ನೀರು ಕೊಡಿ ಎಂದು ಸರಕಾರಗಳಿಗೆ ಅಂಗಲಾಚುತ್ತಾ ನೀರಿಗಾಗಿ ಪಡುತ್ತಿರುವ ಪಡಿಪಾಟಲು ಕಣ್ಣಾರೆ ಕಂಡಿದ್ದೇನೆ, ಆಕ್ರೋಶದಿಂದ ನೊಂದಿದ್ದೇನೆ. ಹೆಚ್.ಎನ್.ವ್ಯಾಲಿ ನೀರಿನಿಂದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಅನುಭವಿಸುತ್ತಿರುವ ಯಮಯಾತನೆಯನ್ನು ಕೂಡ ಕಂಡಿದ್ದೇನೆ.ಬಾದಿತರ ಮನೆಗೆ ತೆರಳಿ ಮಾಹಿತಿ ಪಡೆದು ಕೈಲಾದ ನೆರವು ನೀಡಿದ್ದೇನೆ.ಇಷ್ಟಾದರೂ ನೋಡಿಕೊಂಡು ಸುಮ್ಮನೆ ಕೂತರೆ ನಾನು ಮನುಷ್ಯನಾಗುವುದಿಲ್ಲ ಎಂದು ಭಾವಿಸಿ ಜನಹೋರಾಟದ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಲಕ್ಷಸಹಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಕಂದವಾರಕೆರೆ, ಭಾರತೀನಗರ ಕಲ್ಯಾಣಿಯಲ್ಲಿ, ಅಂದು ಗೋಪಾಲಕೃಷ್ಣ ಕೆರೆಯಲ್ಲಿ, ಮೀನುಗಳ ಮಾರಣ ಹೋಮವಾಗಿದೆ. ಪಾಪ ಅವುಗಳಿಗೆ ಈ ನೀರಿನಿಂದಾಗುತ್ತಿರುವ ಕಷ್ಟವನ್ನು ಹೇಳಿಕೊಳ್ಳಲು ಬಾಯಿಲ್ಲ. ಮನುಷ್ಯರಾಗಿ ನಮಗೆ ಇಲ್ಲವೇ? ಜನಪ್ರತಿನಿಧಿಗಳನ್ನು ಪ್ರಜೆಗಳೇ ಆರಿಸುತ್ತಾರೆ ವಿನಃ ಆಕಾಶದಿಂದಲೋ ದೇವಲೋಕದಿಂದಲೋ ಉದುರುವುದಿಲ್ಲ. ಜನತೆಯ ಕಷ್ಟಗಳಿಗೆ ನೆರವಾಗದವರು ನನ್ನ ಪ್ರಕಾರ ಜನಪ್ರತಿನಿಧಿಗಳೇ ಅಲ್ಲ. ವಿಧಾನ ಸೌಧ, ಲೋಕಸಭೆಯಂತಹ ಶಾಸನ ಮಾಡುವೆಡೆ ಕುಳಿತವರು ಗಮನ ಸೆಳೆಯುವ ಮೂಲಕ ಪರಿಹಾರಕ್ಕೆ ಕಾರಣವಾಗುವ ಅವಕಾಶವನ್ನು ತಮ್ಮ ಕೈಯಾರೆ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ಶಾಸಕರು ಸೇರಿ ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಲಕ್ಷ ಸಹಿ ಸಂಗ್ರಹ ಅಭಿಯಾನವನ್ನು ನಾನು ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಬದಲಿಗೆ ಹೆಚ್.ಎನ್, ವ್ಯಾಲಿ ಎಂಬ ಬೆಂಗಳೂರಿನ ತ್ಯಾಜ್ಯ ನೀರನ್ನು 3ನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಿದ ನಂತರವೇ ಹರಿಸಿ ಎಂದು ಆಗ್ರಹಿಸಲು, ಮುಖ್ಯವಾಗಿ ಈ ದಿಸೆಯಲ್ಲಿ ಕೆಲಸ ಮಾಡಬೇಕಾದ ಸರಕಾರದ ಜನಪ್ರತಿನಿಧಿಗಳ ಕಿವಿಹಿಂಡುವ ಕೆಲಸ ಮಾಡುತ್ತಿದ್ದೇನೆ.ನಮ್ಮ ನೆಲದ ಅಂತರ್ಜಲ ರಕ್ಷಣೆ ಮತ್ತು ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಈ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ ಎಂದರು.ಮುoಬರುವ ಚುನಾವಣೆಗೆ ಮೊದಲೇ ಖಂಡಿತವಾಗಿ ಸರಕಾರ 3ನೇ ಹಂತದ ಶುದ್ಧೀಕರಣ ಮಾಡುವ ಘೋಷಣೆ ಮಾಡಿಯೇ ತೀರುತ್ತಾರೆ.ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು 3ನೇ ಹಂತದ ಶುದ್ಧೀಕರಣದ ಬಗ್ಗೆ ಮಾತನಾಡಿದ್ದಾರೆ.ನಿಮ್ಮ ತಿಪ್ಪೆ ಸಾರಿಸಿ ಹೋಗುವ ಮಾತುಗಳಿಗೆ ಜನತೆ ಸೊಪ್ಪು ಹಾಕುವುದಿಲ್ಲ.ಡಯಾಲಿಸಿಸ್ ರೋಗಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ಈ ಕುಟುಂಬದ ನೋವು ಸರಕಾರಕ್ಕೆ ತಟ್ಟದೆ ಇರುವುದಿಲ್ಲ. ಇಂದಲ್ಲ ನಾಳೆ ನನ್ನ ಜನ ಶುದ್ಧ ನೀರು ಕೊಡಿ ಎಂದು ಸರಕಾರದ ಕುತ್ತಿಗೆಪಟ್ಟಿ ಹಿಡಿದು ಕೇಳುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು. ಕೃಷ್ಣನದಿ ನೀರನ್ನು ಆದಷ್ಟು ಬೇಗ ಜಿಲ್ಲೆಗೆ ತಂದು ಶುದ್ಧನೀರು ಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮತ್ತು ಅವರ ಸರಕಾರ ಮಾಡಬೇಕು.ಶಾಸಕರೇ ನಿಮ್ಮ ಅವಧಿ ಇನ್ನು ಕೇವಲ ಒಂದುವರೆ ವರ್ಷ ಮಾತ್ರವಿದೆ. ಈ ನಡುವೆ ಜನರ ಕಷ್ಟಕ್ಕೆ ಸ್ಪಂದನೆ ಮಾಡಿ ಸಾರ್. ನಿಮ್ಮದೇ ಕೆಲಸ ನೋಡಿಕೊಂಡಿದ್ದರೆ ಹೇಗೆ? 2ಲಕ್ಷ ಮತದಾರರ ಗೌರವ ಘನತೆ ಕಾಪಾಡಿ.ನಾವು ನೀರನ್ನು ಕೇಳುತ್ತಿದ್ದೇನೆ.ಸಹನೆಯ ಕಟ್ಟೆ ಹೊಡೆಯುವ ಮೊದಲು ಎಚ್ಚೆತ್ತುಕೊಳ್ಳಿ,ಇದಕ್ಕೂ ಬಗ್ಗಲಿಲ್ಲ ಎಂದರೆ ರಕ್ತಸಹಿ ಸಂಗ್ರಹ ಚಳವಳಿ ನಡೆಲಿದೆ ಎಂದು ಘೋಷಿಸಿದರು.ಈ ಲಕ್ಷ ಸಹಿ ಅಭಿಯಾನಕ್ಕೆ ಸಾರ್ವ ಜನಿಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದ್ದು ಸಾವಿರಾರು ಮಂದಿ ಭಾವವಹಿಸಿ ಸಹಿ ಮಾಡುವ ಮೂಲಕ ಶುದ್ಧಕುಡಿಯುವ ನೀರಿಗೆ ಆಗ್ರಹಿಸಿ ಸಹಿ ಮಾಡಿದ್ದು ವಿಶೇಷವಾಗಿತ್ತು.
ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಲಕ್ಷ ಸಹಿ ಸಂಗ್ರಹ ಅಭಿಯಾನ ರಾಷ್ಟ್ರಪತಿಗಳ ಗಮನ ಸೆಳೆಯುವ ಕೆಲಸ ಮಾಡಲಾಗಿದೆ: ಸಂದೀಪ್.ಬಿ ರೆಡ್ಡಿ ಹೇಳಿಕೆ



