ಬೆಳಗಾವಿ: ಗೋಕಾಕ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಬೆಳಗಾವಿ ಹಾಲಿ ಸಂಸದೆ ಮಂಗಳಾ ಅಂಗಡಿ ಅವರ ವಿಶ್ವೇಶ್ವರಯ್ಯ ನಗರದಲ್ಲಿರುವ ನಿವಾಸದಲ್ಲಿ ಉಭಯ ನಾಯಕರ ಸಭೆ ನಡೆದಿದೆ. ಚುನಾವಣೆ ತಂತ್ರದ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಿಸಲು ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ.ಒಂದೂವರೆ ಗಂಟೆಗಳ ಕಾಲ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಚುನಾವಣೆ ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ಸೋಮವಾರದಿಂದ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ರಮೇಶ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಗೆಲ್ಲಿಸಬೇಕು. ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿನ ಸೇಡನ್ನು ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ರಮೇಶ್ ಹಾಕಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಪ್ರಯತ್ನಿಸಿ ರಮೇಶ್ ವಿಫಲರಾಗಿದ್ದರು. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲಿಸಲು ಬಿಜೆಪಿಯ ಜಾರಕಿಹೊಳಿ ಸಹೋದರರು ತಂತ್ರ ಹೆಣೆಯುತ್ತಿದ್ದಾರೆ.
ಮತ್ತೊಂದೆಡೆ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮೃಣಾಲ್ ಬೆನ್ನಿಗೆ ನಿಂತಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಮೃಣಾಲ್ ಜೊತೆಗೆ ಸತೀಶ್ ಜಾರಕಿಹೊಳಿ ಪ್ರಚಾರಾಭಿಯಾನ ನಡೆಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭ್ಯರ್ಥಿ ಮೃಣಾಲ್ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ.