ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕದಂತೆ ಮುನ್ನೆಚ್ಚರಿಕೆ ವಹಿಸಿರುವ ಬಜೆಟ್ ಇದಾಗಿದ್ದು, ಹಲವು ಮಹತ್ವದ ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ರಾಜ್ಯದ ಒಟ್ಟು ಬಜೆಟ್ ಗಾತ್ರ 3,71,383 ಕೋಟಿ ಇದೆ. ಆಯವ್ಯಯ ಪುಸ್ತಕ ಒಟ್ಟು 181 ಪುಟಗಳಿಂದ ಕೂಡಿದೆ.ಬಜೆಟ್ ಭಾಷಣದ ಆರಂಭದಲ್ಲಿ ಮುಖ್ಯಮಂತ್ರಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ್ದ ಸಂವಿಧಾನದ ಆಶಯದಂತೆ ನ್ಯಾಯ ಸಮಾನತೆ ಹಾಗೂ ಬಾತೃತ್ವದ ತಳಹದಿಯ ಮೇಲೆ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ಸ್ಥಾಪಿಸುವುದು ರೂಪಿಸಲು ನಾವು ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ.
ಸಾಮಾಜಿಕ ನ್ಯಾಯ ಎಂದು ನಮ್ಮ ನಂಬಿಕೆ ಮಾತ್ರವಲ್ಲ. ಅದು ಉದಾತ್ತ ಜೀವನ. ದೃಷ್ಠಿಕೋನ, ಸಮಸಮಾಜ ನಿರ್ಮಾಣದಲ್ಲಿ ಬಸವಾಧಿ ಶರಣರ ಕಾಯಕ ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿವೆ ಎಂದಿರುವ ಅವರು, ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕು ಎಂದು ಶರಣರ ಚಿಂತನೆ ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿಯೇ ವರನಟ ಡಾ. ರಾಜ್ಕುಮಾರ್ ಅವರು ನಟಿಸಿರುವ ಬಂಗಾರದ ಮನುಷ್ಯದ ಚಿತ್ರದ ಆರ್.ಎನ್. ಜಯಗೋಪಾಲ್ ಅವರ ರಚನೆಯಆಗದು ಎಂದು ಕೈಕಟ್ಟಿ ಕುಳಿತರೆ..ಸಾಗದು ಕೆಲಸವು ಮುಂದೆ..ಮನಸೊಂದಿದ್ದರೆ ಮಾರ್ಗವುಂಟು…
ಕೆಚ್ಚೆದೆಯಿರಬೇಕೆಂದು…. ಹಾಡನ್ನು ಪ್ರಸ್ತಾಪಿಸಿ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ ಎಂದು ಹೇಳಿದ ಅವರು, ನಮ್ಮ ಮಹತ್ವಾಕಾಂಕ್ಷಿಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು.
ಡಾ.ಜಿ.ವೈ. ಪದ್ಮನಾಗರಾಜು