ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಹಲ್ಲೆ ನಡೆಸಿರುವ ಆರೋಪವಿದೆ. ಪ್ರಕರಣ ಸಂಬಂಧ ಮಹಿಳೆ ಜಿಲ್ಲಾ ಪಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಅವರಿಗೆ ದೂರು ನೀಡಿದ್ದಾರೆ.
ಎಸ್ಪಿ ಸೂಚನೆ ಮೇರೆಗೆ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಎನ್ನಲಾದ ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್, ಇಸ್ಮಾಯಿಲ್ ಸೇರಿದಂತೆ 20 ಜನರ ವಿರುದ್ಧ ಐಪಿಸಿ ಸೆಕ್ಷನ್ 1860ರಡಿ 143, 147, 354(ಚಿ), 354(b), 323, 324, 384, 201, 427, 342, 307, 504, 505, 149ರಡಿ ದೂರು ದಾಖಲಾಗಿದೆ.
ಮಹಿಳೆಯ ಜಮೀನಿನಲ್ಲಿ ಪೈಪ್ಲೈನ್ವೊಂದು ಹಾದುಹೋಗಿತ್ತು. ಈ ಪೈಪ್ಲೈನ್ನಿಂದ ಬೆಳೆಹಾನಿಯಾಗುತ್ತಿದೆ, ಹೀಗಾಗಿ ಇದನ್ನು ತೆರವುಗೊಳಿಸುವಂತೆ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದ್ದರು. ಹಲವು ಬಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮಕೈಗೊಂಡಿರಲಿಲ್ಲ.
ಈ ವಿಚಾರವಾಗಿ ಮಹಿಳೆಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆದಿತ್ತು.
ಇದಾದ ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಸಿದ್ದನು. ನಂತರ ಮತ್ತೆ ಮಹಿಳೆ ಜೊತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಗಲಾಟೆ ಮಾಡಿದ್ದರು. ಈ ವೇಳೆ ತನ್ನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.