ಬೆಂಗಳೂರು: ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ದಾರುಣ ಘಟನೆ, ಮಾಲೂರಿನ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿ ಸ್ವಚ್ಛಗೊಳಿಸಿದ ಹೃದಯ ವಿದ್ರಾವಕ ಘಟನೆ – ಹೀಗೆ ಸಾಲು ಸಾಲು ವೈಫಲ್ಯಗಳು, ಒಂದರ ಮೇಲೊಂದು ವಿವಾದಗಳು, ಒಳಜಗಳದ ಮುಜುಗರದಿಂದ ಜನತೆಗೆ ಮುಖ ತೋರಿಸಲೂ ಆಗದಂತಹ ದುಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸರ್ಕಾರ ಈಗ ಹಿಜಾಬ್ ಮುಖವಾಡ ಹಾಕಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ದೂರಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಓದುವ ಮಕ್ಕಳಲ್ಲಿ ಸಮಾನತೆಯ ಭಾವನೆ ಮೂಡಿಸುವ ಸಮವಸ್ತ್ರ ಬಿಟ್ಟು, ಧರ್ಮದ ಹೆಸರಿನಲ್ಲಿ ಎಳೆಯ ಮನಸ್ಸುಗಳನ್ನು ಒಡೆಯುವ ಹಿಜಾಬ್ ವಿಷಯವನ್ನ ಮತ್ತೆ ಕೆದಕುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕೀಯಕ್ಕೆ ಮೊರೆ ಹೋಗಿದೆ. ಕನ್ನಡಿಗರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.