ಜೈಪುರ: ಬೆಂಗಳೂರು, ದೆಹಲಿ ಮಾದರಿಯಲ್ಲೇ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸುಮಾರು 4-5 ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತ ಅಧಿಕಾರಿಗಳು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ, ಕ್ರೈಂ ಬ್ರಾಂಚ್ ಅಧಿಕಾರಿ ತಂಡಗಳು ಸ್ಥಳಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿವೆ. ಮತ್ತೊಂದು ಕಡೆ ಇ-ಮೇಲ್ ಮೂಲವನ್ನು ಪತ್ತೆಹಚ್ಚಲು ತನಿಖಾ ತಂಡಗಳು ಮುಂದಾಗಿವೆ.ಕಳೆದ ಒಂದು ದಿನದ ಹಿಂದೆಯಷ್ಟೇ ದೆಹಲಿಯ ಬುರಾರಿ ಸರ್ಕಾರಿ ಆಸ್ಪತ್ರೆ, ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಇದಕ್ಕೂ ಮುನ್ನ ದೆಹಲಿಯ ಎನ್ಸಿಆರ್ನಲ್ಲಿ ಸುಮಾರು 130ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಇದೀಗ ಜೈಪುರದಲ್ಲಿ ಬಾಂಬ್ ಬೆದರಿಕೆ ಬಂದಿರುವುದು ಸಾರ್ವಜನಿಕರನ್ನು ಆತಂಕಗೊಳಿಸಿವೆ.ಬಾಂಬ್ ಬೆದರಿಕೆ ಕೇಳಿಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ವಿದ್ಯಾರ್ಥಿ ಮತ್ತು ಶಿಕ್ಷಕರನ್ನ ಸ್ಥಳಾಂತರಿಸಿದ್ದಾರೆ. ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಮೂಲ ಪತ್ತೆಹಚ್ಚಲು ನಮ್ಮ ತಂಡ ಮುಂದಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ.