ಮೈಸೂರು: ಹಿರಿಯ ರಂಗಕರ್ಮಿ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕ ನ. ರತ್ನ ಇಂದು ನಿಧನರಾಗಿದ್ದಾರೆ.ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ, ಅನೇಕ ನಾಟಕಗಳೊಂದಿಗೆ ರಂಗ ಭೂಮಿಯಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದ ನ. ರತ್ನ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನ. ರತ್ನ ಅವರಿಗೆ 89 ವರ್ಷ ವಯಸ್ಸಾಗಿತ್ತು, ಅವರಿಗೆ ಪುತ್ರ ಅಜಿತ್, ಪುತ್ರಿ ಕವಿತಾರತ್ನ ಇದ್ದಾರೆ. ಅವರು ರಚಿಸಿದ ‘ಶಾಂತಿ ಕುಟೀರ’ ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಹಿರಿಯ ರಂಗಕರ್ಮಿ ಮತ್ತು ವಾಕ್ಶ್ರವಣ ಶಿಕ್ಷಣ ತಜ್ಞ ಡಾ.ನ.ರತ್ನ ಅವರ ಅಗಲಿಕೆ ಎಂದೆಂದೂ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಅಧ್ಯಾಪನ ಮತ್ತು ರಂಗಚಟುವಟಿಗಳ ಜೊತೆಗೆ ಮೈಸೂರಿನ ಪ್ರಖ್ಯಾತ ವಾಕ್ ಶ್ರವಣ ಚಿಕಿತ್ಸಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ನ.ರತ್ನ ಅವರು ದೈಹಿಕ ನ್ಯೂನತೆ ಹೊಂದಿರುವ ಸಾವಿರಾರು ಜನರ ಪಾಲಿನ ಜೀವದಾತರಾಗಿದ್ದರು. ಈ ಪುಣ್ಯಪುರುಷನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.