ಬೆಂಗಳೂರು: “ನಾನು ಹಾಗೂ ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿದ್ದು, ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮ ಮಾಡಿಸಿಕೊಂಡು ಬರುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದರು.
“ನಿಗಮ ಮಂಡಳಿ ನೇಮಕ ವಿಚಾರವಾಗಿ ಈಗಾಗಲೇ ಸಭೆ ಮಾಡಿ ಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಈ ಮಧ್ಯೆ ಬೇರೆ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಕಾರಣ ಅದು ಅಂತಿಮವಾಗಿಲ್ಲ. ಈಗ ದೆಹಲಿಯಲ್ಲಿ ಈ ಪಟ್ಟಿ ಅಂತಿಮವಾಗಲಿದೆ” ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಭೇಟಿಗೆ ಪ್ರಧಾನಮಂತ್ರಿಗಳು ಸಮಯಾವಕಾಶ ನೀಡಿದ್ದಾರಂತಲ್ಲ ಎಂದು ಕೇಳಿದಾಗ, “ಅವರು ಹೋಗಿ ಭೇಟಿ ಮಾಡುತ್ತಾರೆ” ಎಂದು ತಿಳಿಸಿದರು.
ಇದೇ 21ಕ್ಕೆ ಸಿಡಬ್ಲ್ಯೂಸಿ ಸಭೆ ಬಗ್ಗೆ ಕೇಳಿದಾಗ, “ಇಲ್ಲೂ ಇದೆ, ನಾಗ್ಪುರದಲ್ಲೂ ಇದೆ” ಎಂದು ತಿಳಿಸಿದರು.ಇಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಎರಡು ಮೂರು ದಿನಗಳ ಕಾಲ ದೆಹಲಿಯಲ್ಲಿಯೇ ಇದ್ದು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಪಕ್ಷದ ಸಂಘಟನೆ ಸಂಬಂಧ ರಾಜ್ಯದ ಪಕ್ಷದಲ್ಲಿನ ಪದಾಧಿಕಾರಿಗಳ ನೇಮಕಾತಿ ಬಗ್ಗೆಯೂ ಚರ್ಚೆ ನಡೆಸಲಿರುವ ಅವರು ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ನಾಳೆ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗಧಿಯಾಗಿದೆ.
ಒಟ್ಟಾರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ದೆಹಲಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.