ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಇಂದು ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿ, ಮೂಲಸೌಲಭ್ಯಗಳನ್ನು ಪರಿಶೀಲಿಸಿದರು.ತೊಕ್ಕರೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿದರು. ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿದರು. ದೊಡ್ಡಾಣೆ ಗ್ರಾಮದ ಶಾಲೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಇನ್ನಿತರ ಮೂಲಸೌಕರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಆರ್.ಟಿ.ಸಿ, ಆಧಾರ್, ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಕೊಡಲು ಸೂಚನೆ ನೀಡಿದರು. ಸ್ಥಳೀಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳು ಶಾಲೆ ತೊರೆಯಬಾರದು. ಶಿಕ್ಷಣದ ಮಹತ್ವವನ್ನ ಅರಿತು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಮಲೆ ಮಹದೇಶ್ವರಬೆಟ್ಟ ಪ್ರದೇಶದಲ್ಲಿರುವ ಅಕ್ಕ ಕೆಫೆಗೆ ಭೇಟಿ ನೀಡಿ ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಮೈರಾಡಾ ವತಿಯಿಂದ ಸ್ಥಾಪಿಸಲಾಗಿರುವ ಒಣ ಕಸ ಘಟಕವನ್ನು ಉದ್ಘಾಟಿಸಿ, ಎಸ್.ವಿ.ವೈ.ಎಂ ಸಂಸ್ಥೆಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸ್ಥಳೀಯ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಕೀರನಹೊಳೆ ಗ್ರಾಮದಲ್ಲಿರುವ ಲಾಂಟಾನಾ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ತಯಾರು ಮಾಡಲಾಗಿರುವ ಕರಕುಶಲ ವಸ್ತುಗಳು, ಪೀಠೋಪಕರಣಗಳನ್ನು ವೀಕ್ಷಿಸಿದರು. ಕರಕುಶಲಗಾರರೊಂದಿಗೆ ಕಚ್ಚಾ ವಸ್ತುಗಳ ಲಭ್ಯತೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಸಮಾಲೋಚಿಸಿದರು. ಉತ್ಪನ್ನಗಳ ತಯಾರಿ ಸಂಬAಧ ಪ್ರೋತ್ಸಾಹ ನೀಡಿದರು.
ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ: ಅಹವಾಲು ಆಲಿಕೆ, ಮೂಲ ಸೌಲಭ್ಯಗಳ ಪರಿಶೀಲನೆ



