ಚಾಮರಾಜನಗರ: ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತಾನೆ. ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪಬೇಕಿರುವುದು ನಮ್ಮ ಕೆಲಸ. ದೇವರು ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಸ್ವಲ್ಪಮಟ್ಟಿಗೆ ದಾನ ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಲಹೆ ಮಾಡಿದರು. ಕೊಳ್ಳೇಗಾಲ ತಾಲ್ಲೂಕಿನ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಶ್ರೀಜಗನ್ಮೋಹನ ರಂಗ ನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಪೂರಕ ಅಷ್ಟಬಂಧನ ದಿವ್ಯ ಮಹಾ ಕುಂಭಾಭಿ ಷೇಕ-ಸಂಪ್ರೋಕ್ಷಣ ಮಹೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವರಿಗೆ ಜಾತಿ, ಧರ್ಮ ಎಂಬುದು ಇರುವು ದಿಲ್ಲ. ಧರ್ಮ ಯಾವುದಾದರೂ ತತ್ವವೊಂದೇ, ದೈವ ನೂರಾದರೂ ಭಕ್ತಿಯೊಂದೆ, ಕರ್ಮ ಹಲವಾರೂ ಇದ್ದರು ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಕಾವೇರಿ ನದಿ ಸನಿಹದಲ್ಲಿ ರಂಗನಾಥನ ಸನ್ನಿಧಿ ಇರುವುದು ಪುಣ್ಯ. ದರ್ಗಾ ಸಹ ಇರುವುದು ಈ ನೆಲದ ಸೌಹಾರ್ಧತೆ ಎಂದರು.ಚಾಮರಾಜನಗರ ಹಿಂದುಳಿದ ಜಿಲ್ಲೆಯಲ್ಲ. ಇದು ದೇವರ ನಾಡು. ಮಲೆ ಮಹದೇಶ್ವರ, ಚಾಮರಾಜೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ, ಮಧ್ಯರಂಗ ಹೀಗೆ ಹಲವು ದೇವರು ನೆಲೆಸಿರುವ ಬೀಡು. ಕಾವೇರಿ ನದಿಯ ತಟದಲ್ಲಿ ರಂಗನಾಥಸ್ವಾಮಿ ನೆಲೆಸಿ ಹರಸುತ್ತಿದ್ದಾರೆ ಎಂದರು.
ಎಎAಆರ್ ಗ್ರೂಪಿನ ಮಹೇಶ್ ರೆಡ್ಡಿ ಅವರು ಹಾಗೂ ಕುಟುಂಬ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ಲಕ್ಷ್ಮೀ ಅಮ್ಮನವರು ರಂಗನಾಥಸ್ವಾಮಿಯ ಸೇವೆ ಮಾಡುವ ಭಾಗ್ಯ ಇವರಿಗೆ ಅವಕಾಶ ಸಿಕ್ಕಿದೆ. ಇನ್ನೂ ಹೆಚ್ಚಿನ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ ಅಂದರೆ ಅರ್ಚಕರ ಪ್ರಭಾವದಿಂದ ಶಿಲೆಯ್ಲಲೂ ಶಿವನನ್ನು ಕಾಣಬಹುದು. ದೇವರು, ದೇವಸ್ಥಾನ ಎಲ್ಲರ ಆಸ್ತಿ ಎಂದು ತಿಳಿಸಿದರು.
ಆದಿರಂಗ, ಮಧ್ಯರಂಗ ಹಾಗೂ ಅಂತ್ಯ ರಂಗವನ್ನು ಸೂರ್ಯ ಹುಟ್ಟಿದಾಗಿನಿಂದ ಮುಳುಗುವ ತನಕ ದರ್ಶನ ಮಾಡುತ್ತಾರೆ. ದೇವಸ್ಥಾನದ ಜೀರ್ಣೋದ್ಧಾರ ಉತ್ತಮವಾಗಿ ನಡೆದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಅರ್ಚಕರು ಪೂಜೆ ಪುನಸ್ಕಾರ, ಹೋಮ ಹವನಗಳನ್ನು ಮಾಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸಮಸ್ಯೆಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಇದಕ್ಕೂ ಮುನ್ನ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಸೇರಿದಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಮುಜರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರೊಂದಿಗೆ ರಂಗನಾಥಸ್ವಾಮಿ ಹಾಗೂ ರಂಗನಾಯಕಿ (ಲಕ್ಷ್ಮೀ) ಅಮ್ಮನವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಆರ್. ಮಂಜುನಾಥ್, ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚುಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಮಾಜಿ ಶಾಸಕರಾದ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಎಂ.ಆರ್.ಗ್ರೂಪ್ ಕಂಪನಿ ಮಾಲೀಕರು ಹಾಗೂ ದಾನಿಗಳಾದ ಮಹೇಶ್ ರೆಡ್ಡಿ, ರಾಧಿಕಾ ರೆಡ್ಡಿ ಇದ್ದರು.
`ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪುವುದು ನಮ್ಮ ಕೆಲಸ’



