ಬೆಂಗಳೂರು: ಸುದೀರ್ಘ ಕಾಲ ವಾರುಸುದಾರರಿಲ್ಲದೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ತೆರವು ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರಂನ ವಾರಾಹಿ ದೇವಸ್ಥಾನದ ಬಳಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಸ್ತೆ ಮತ್ತು ಫುಟ್ಬಾತ್ ಯಾರ ಆಸ್ತಿಯೂ ಅಲ್ಲ. ಇದು ಸಾರ್ವಜನಿಕ ಆಸ್ತಿ. ಈ ಜಾಗದಲ್ಲಿ ಸಾರ್ವಜನಿಕರು ಓಡಾಡಲು ಅಡ್ಡಿಪಡಿಸಲು ಯಾರೂ ಮುಂದಾಗಬಾರದು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಸುದೀರ್ಘಕಾಲ ನಿಲ್ಲಿಸಿದ್ದ ವಾಹನಗಳನ್ನು ತೆರವು ಮಾಡಲಾಗುತ್ತಿದೆ. ಕಳೆದವಾರವಷ್ಟೆ ಇಂತಹ ವಾಹನಗಳಿಗೆ ನೋಟೀಸ್ ಅಂಟಿಸಿ ಸೂಚನೆ ನೀಡಲಾಗಿತ್ತು.ಏಳು ದಿನಗಳಾದರೂ ತೆರವು ಮಾಡದ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಅವುಗಳನ್ನು ಒಂದೆಡೆ ನಿನ್ಲಿ÷್ಲಸಿ ಇನ್ನು 15 ದಿನಗಳ ಕಾಲ ಸಮಯವಾಕಾಶ ನೀಡಲಾಗುವುದು. ಆಗಲು ಸಹ ಅವುಗಳನ್ನು ವಾರುಸುದಾರರು ಬಿಡಿಸಿಕೊಂಡು ಹೋಗದೇ ಇದ್ದಲ್ಲಿ ಅಂತಹ ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು ಎಂದು ಹೇಳಿದ್ದಾರೆ. ಅಸ್ತ್ರ ತಂತ್ರಾಂಶದ ಮೂಲಕ ಈಗಾಗಲೇ ವಾಹನಗಳನ್ನು ಸುದೀರ್ಘ ಕಾಲ ನಿಲ್ಲಿಸಿರುವುದು ಪತ್ತೆ ಹಚ್ಚಲಾಗಿದೆ. ಅಂತಹ ವಾಹನಗಳನ್ನು ಮಾಲೀಕರು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ನಿಯಾಮಾನುಸಾರ ಅವುಗಳನ್ನು ಅಲ್ಲಿಂದ ತೆರವುಗೊಳಿಸಲಾಗುವುದು. ಬೆಂಗಳೂರಿನಲ್ಲಿರುವ ಹಲವು ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸಲು ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಶಾಸಕ ದಿನೇಶ್ಗುಂಡೂರಾವ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ರಾವ್ ಸೇರಿದಂತೆ ಸಂಚಾರಿ ಪೊಲೀಸ್ ಅಧಿಖಾರಿಗಳು ಜಿಬಿಎ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು. ಜಿಬಿಎ ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಹಳೆ ವಾಹನಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.



