ಬೇಲೂರು: ತಾಲ್ಲೂಕಿನ ವಿಕಲಚೇತನರು, ವೃದ್ಧರು, ವಿಧವೆಯರು ಹಾಗೂ ಅಬಲೆಯರ ಪಾಲಿಗೆ ಜೀವನಾಧಾರವಾಗಿರುವ ಸರ್ಕಾರದ ಮಾಸಾಶನ ಕಳೆದ ಎರಡು ರಿಂದ ಮೂರು ತಿಂಗಳಿನಿಂದ ಸರಿಯಾಗಿ ಜಮೆಯಾಗದೆ ಇರುವುದರಿಂದ ಫಲಾನುಭವಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಪ್ರತಿಮಾಸವೂ ಸರ್ಕಾರದಿಂದ ದೊರೆಯುವ ಪಿಂಚಣಿ ಹಣದ ಮೇಲೆಯೇ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ದೈನಂದಿನ ಖರ್ಚು ನಿರ್ವಹಣೆಯೇ ಕಷ್ಟಕರವಾಗಿದೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ.ವಿಶೇಷವಾಗಿ ಅಂಗವಿಕಲರು ದೈಹಿಕ ಅಸಹಾಯಕತೆಯ ನಡುವೆಯೇ ಸರ್ಕಾರದ ನೆರವಿನ ಮೇಲೆ ಅವಲಂಬಿತರಾಗಿದ್ದು, ಪಿಂಚಣಿ ತಡವಾಗುತ್ತಿರುವುದರಿಂದ ಔಷಧಿ ಖರೀದಿ, ಆಹಾರ ವ್ಯವಸ್ಥೆ ಹಾಗೂ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣ ಗಮನಹರಿಸಿ ಬಾಕಿ ಇರುವ ಮಾಸಾಶನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ವಿಕಲಚೇತನರ ಸಂಘಟನೆಗಳು ಆಗ್ರಹಿಸಿವೆ.ಈ ಕುರಿತು ಮಾತನಾಡಿದ ದಿವ್ಯಾಂಗಚೇತನ ಗೆಳೆಯರ ಬಳಗದ ಕಾರ್ಯದರ್ಶಿ ಗಿರೀಶ್ ಎಸ್, ?ಸರ್ಕಾರ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚುವ ಕಾರ್ಯ ಮಾಡುವುದು ತಪ್ಪಲ್ಲ. ಆದರೆ ನಿಜವಾದ ವಿಕಲಚೇತನರ ಬದುಕಿನ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಪಿಂಚಣಿ ತಡೆಹಿಡಿಯುವುದು ಸರಿಯಲ್ಲ. ಯಾರಾದರೂ ದಾಖಲಾತಿ ಪರಿಶೀಲನೆ ಬೇಕಿದ್ದರೆ ಅಥವಾ ಹೊಸ ದಾಖಲೆಗಳನ್ನು ಸಲ್ಲಿಸಬೇಕಿದ್ದರೆ ಸಂಬAಧಪಟ್ಟ ಇಲಾಖೆ ಮುಂಚಿತವಾಗಿ ನೋಟಿಸ್ ನೀಡಬೇಕು. ಯಾವುದೇ ಮಾಹಿತಿ ನೀಡದೆ ಮಾಸಾಶನ ಸ್ಥಗಿತಗೊಳಿಸಿರುವುದು ಫಲಾನುಭವಿಗಳನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಹಲವು ವೃದ್ಧರು ಹಾಗೂ ವಿಧವೆಯರು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದು, ಸ್ಪಷ್ಟ ಮಾಹಿತಿ ಸಿಗದೆ ಗೊಂದಲದಲ್ಲಿದ್ದಾರೆ. ಸರ್ಕಾರದಿಂದ ಸಿಗುವ ಈ ನೆರವಿನ ಮೇಲೆಯೇ ಬದುಕು ಸಾಗಿಸುತ್ತಿರುವ ಅನೇಕರು ಸಾಲಮಾಡಿ ಜೀವನ ನಡೆಸುವ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಮೂಲವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಿ, ತಾಂತ್ರಿಕ ದೋಷವೋ ಅಥವಾ ದಾಖಲೆಗಳ ಪರಿಶೀಲನೆಯೋ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಬಾಕಿ ಇರುವ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಿ ಫಲಾನುಭವಿಗಳ ಆತಂಕ ನಿವಾರಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.ನಕಲಿ ಅಂಗವಿಕಲರನ್ನು ಕಂಡು ಹಿಡಿಯಲು ಹೋಗಿ ನಿಜವಾದ ಅಂಗವಿಕಲರ ಹೊಟ್ಟೆಯ ಮೇಲೆ ಹೊಢಯುವುದು ಎಷ್ಟು ಸರಿ. ಈ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು, ವಿಕಲಚೇತನರು ಸೇರಿದಂತೆ ಎಲ್ಲ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕೆಂದು ದಿವ್ಯಾಂಗಚೇತನ ಗೆಳೆಯರ ಬಳಗ ಕಾರ್ಯದರ್ಶಿ ಗಿರೀಶ್ ಎಸ್ ಆಗ್ರಹಿಸಿದ್ದಾರೆ.



