ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ವಿವರವಾದ ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದುಹಾಕಲು ಹಾಗೂ ಪೋರಜನಿ ಮ್ಯಾಪಿಂಗ್ ಮಾಡಲು ಜೂನ್ 16 ರವರೆಗೆ ಅವಕಾಶವಿರುತ್ತದೆ. ಆ ಬಳಿಕ ಪೋರ್ಟಲ್ ಫ್ರೀಜ್ ಆಗಲಿದ್ದು, ಕರಡು ಮತದಾರರ ಪಟ್ಟಿ (ಪ್ರಕಟವಾಗುವವರೆಗೆ ಯಾವುದೇ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ ಎಂದರು.
ಎಸ್.ಐ.ಆರ್. ಪ್ರಕ್ರಿಯೆ ಆರಂಭವಾಗಿದ್ದು ಮತಗಟ್ಟೆ ಅಧಿಕಾರಿಗಳಿಗೆ ಸಿದ್ದತೆ, ತರಬೇತಿ ಮತ್ತು ಮುದ್ರಣವು ಜೂನ್ 26 ರಿಂದ 29 ವರೆಗೆ ನಡೆಯಲಿದೆ. ನಂತರ ಮತಗಟ್ಟೆ ಮಟ್ಟದ ಬಿಎಲ್ಒಗಳು ಮನೆ ಮನೆ ಭೇಟಿಯು ಜೂನ್ 30 ರಿಂದ ಜುಲೈ 29 ರವರೆಗೆ ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯುವರು.ನಂತರ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5 ರಂದು ಪ್ರಕಟಿಸಲಿದ್ದು ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 4 ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯನ್ನು ಅಕ್ಟೋಬರ್ 7 ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ ಎಂದರು. ಎಸ್.ಐ.ಆರ್. ಸುಲಭ ವಿಧಾನವಾಗಿದೆ, ಮತದಾರರ ಪಟ್ಟಿಯಲ್ಲಿ ಹೆಸರಿದ್ದು 1987 ರ ಜುಲೈ 1 ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು. 2004 ರ ಡಿಸೆಂಬರ್ 2 ರ ವರೆಗಿನ ಜನ್ಮ ದಿನಾಂಕದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢಪಡಿಸುವ ದಾಖಲೆ ನೀಡಬೇಕು. 2004 ರ ಡಿಸೆಂಬರ್ 2 ರ ನಂತರ ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಂದೆ ಹುಟ್ಟಿದ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಾಯಿ ಹುಟ್ಟಿದ ದಿನಾಂಕ,ಸ್ಥಳವನ್ನು ದೃಢಪಡಿಸುವ ದಾಖಲೆ, ಯಾವುದೇ ಪೋಷಕರು ಭಾರತೀಯರಲ್ಲದಿದ್ದರೆ ಜನನದ ಸಮಯದಲ್ಲಿ ಪೋಷಕರ ಮಾನ್ಯವಾದ ಪಾಸ್ ಪೋರ್ಟ್ ಮತ್ತು ವೀಸಾ ದಾಖಲೆ ನೀಡಬೇಕು. ಭಾರತದ ಹೊರಗೆ ಜನಿಸಿದವರು ಅಥವಾ ನೈಸರ್ಗಿಕವಾಗಿ ಜನಿಸಿದವರು ವಿದೇಶದಲ್ಲಿರುವ ಭಾರತೀಯ ಮಿಷನ್ನಿಂದ ಜನನ ನೊಂದಣಿ ದಾಖಲೆ ನೀಡಬೇಕು, ನೈಸರ್ಗಿಕವಾಗಿ ಜನಿಸಿದವರು ಪೌರತ್ವ ನೊಂದಣಿ ಪ್ರಮಾಣ ಪತ್ರ ನೀಡಬೇಕು ಎಂದರು. ಮತದಾರರ ನೊಂದಣಿ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ; ಸಾರ್ವಜನಿಕರು ಹಾಗೂ 18 ವಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಆಯಾ ಭಾಗದ ಬಿಎಲ್ಒಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ, ಆನ್ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಮತ್ತು ಸಣ್ಣಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎಸ್.ಐ.ಆರ್.ಗೆ ಮತದಾರರ ಸಹಾಯ ಕೇಂದ್ರ; ಸಾರ್ವಜನಿಕರ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವೋಟರ್ ಫೆಸಿಲಿಟೇಶನ್ ಸೆಂಟರ್ಗಳನ್ನು ತೆರೆಯಲಾಗುತ್ತಿದೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾಲಿಕೆ ವಿಭಾಗೀಯ ಕಂದಾಯ ಕಚೇರಿಗಳಿರುವ 2 ವಲಯಗಳ ಕಚೇರಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಂಟರ್ನೆಟ್ ಅಥವಾ ಕಂಪ್ಯೂಟರ್ ಜ್ಞಾನವಿಲ್ಲದವರು ಈ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಸಾರ್ವಜನಿಕರ ದೂರು ಹಾಗೂ ಸಂದೇಹಗಳ ನಿವಾರಣೆಗಾಗಿ 1950 ಉಚಿತ ಸಹಾಯವಾಣಿ ಸಂಖ್ಯೆಯನ್ನು ಜಾರಿಗೆ ತರಲಾಗಿದ್ದು, ಇದು ಬೆಳಿಗ್ಗೆ 8:00 ಗಂಟೆಯಿAದ ರಾತ್ರಿ 8:00 ಗಂಟೆಯವರೆಗೆ (ಎರಡು ಶಿಫ್ಟ್ಗಳಲ್ಲಿ) ಕಾರ್ಯನಿರ್ವಹಿಸಲಿದೆ.ರಾಜಕೀಯ ಪಕ್ಷಗಳ ಸಹಭಾಗಿತ್ವ : ಈಗಾಗಲೇ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸೂಕ್ತ ಮಾಹಿತಿ ನೀಡಲಾಗಿದೆ. ಬಿಎಲ್ಒಗಳಿಗೆ ಸಹಕರಿಸಲು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ರಾಜಕೀಯ ಪಕ್ಷಗಳು ತಮ್ಮ ಬಿಎಲ್ಎ ಗಳನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷವು ಹರಿಹರ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಿಗೆ ಬಿಎಲ್ಎಗಳ ಪಟ್ಟಿಯನ್ನು ನೀಡಿದೆ ಎಂದರು.ಎಸ್.ಐ.ಆರ್. ಎಂದರೆ ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ಕೈಬಿಡುವುದಿಲ್ಲ. ಸಾರ್ವಜನಿಕರು ಬಿಎಲ್ಒಗಳು ಮನೆಗೆ ಬಂದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಒಂದು ವೇಳೆ ಹೆಸರು ಬಿಟ್ಟುಹೋಗಿದ್ದಲ್ಲಿ ಜನ್ಮ ದಿನಾಂಕ ದೃಢೀಕರಣ ಪತ್ರ, ಪಡಿತರ ಚೀಟಿ, ,ನರೇಗಾ ಕಾರ್ಡ್, ನೀಡಿ ಹೆಸರು ಸೇರಿಸಬಹುದು. ಆದರೆ ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ಚೀಟಿಯಾಗಿ ಮಾತ್ರ ಪರಿಗಣಿಸಲಾಗುವುದು, ವಾಸಸ್ಥಳದ ದಾಖಲೆಯಲ್ಲ ಎಂದರು.ಅರೆ ನ್ಯಾಯಾಂಗ ಪ್ರಕ್ರಿಯೆಯಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಸಾರ್ವಜನಿಕರ ಆಕ್ಷೇಪಣೆಗಳನ್ನು ಇಆರ್ಒ ಮಟ್ಟದಲ್ಲಿ ವಿಚಾರಣೆ ನಡೆಸಿ ಬಗೆಹರಿಸಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಈ ವಿಶೇಷ ಪರಿಷ್ಕರಣೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ, ಎಸ್ಐಆರ್ಪ್ರಕ್ರಿಯೆ ಪ್ರಾರಂಭ: ಗಂಗಾಧರಸ್ವಾಮಿ



