ಪಾಂಡವಪುರ: ತಾಲೂಕಿನ ಕುಂತಿಬೆಟ್ಟದ ಕುವೆಂಪು ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದಲೂ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಪ್ರಭಾರಿ ಮುಖ್ಯ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಹಿರೇಮರಳಿ ಪಾರ್ಥೇಗೌಡ ಅವರಿಗೆ ಇಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿತು.
ಪಾರ್ಥೇಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಪಾರ್ಥೇಗೌಡರು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಥೆಗೆ ಒಂದು ಕಿರೀಟ ಇದ್ದಂತೆ. ಯಾವುದೇ ಕೆಲಸವನ್ನು ಸಂಸ್ಥೆ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ ಮಾತನಾಡಿ, ಪಾರ್ಥೇಗೌಡರು 30ವರ್ಷಗಳ ಸುದೀರ್ಘ ಸೇವೆಯಲ್ಲಿ ಶಾಲೆಯ ದಾಖಲಾತಿ ಮತ್ತು ಶಾಲೆಯ ಉಳಿವಿಗಾಗಿ ಶ್ರಮಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಉಪಾಧ್ಯಕ್ಷ ಡಿ.ಕೆ.ದೇವೇಗೌಡ ಮಾತನಾಡಿ, ಕ್ರೀಡೆಯಲ್ಲಿ ಪಾರ್ಥೇಗೌಡರು ಹೆಚ್ಚು ಕ್ರಿಯಾಶೀಲ ವ್ಯಕ್ತಿಯಾಗಿ ಶಾಲೆಯ ಮಕ್ಕಳ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಖೋಖೋ ಮತ್ತು ಕಬಡ್ಡಿಯಲ್ಲಿ ಸಾಧನೆ ಮಾಡಿದ್ದರು. ಜತೆಗೆ ಸ್ವತಃ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಅವರ ಸೇವಾ ಕಾರ್ಯಕ್ಕೆ ಮೆರುಗು ನೀಡಿದೆ ಎಂದರು.
ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ, ಉಪಾಧ್ಯಕ್ಷ ಡಿ.ಕೆ.ದೇವೇಗೌಡ, ನಿರ್ದೇಶಕ ಕೆನ್ನಾಳು ಚಂದ್ರಶೇಖರ್, ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಶೇಖರಯ್ಯ, ಎಸ್.ಎಲ್.ರಾಮಕೃಷ್ಣ, ವೆಂಕಟೇಶ್, ನಿವೃತ್ತ ತೋಟಗಾರಿಕೆ ಶಿಕ್ಷಕ ಮರಿಕುಂಟೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಾದೇಶ್, ಶಿಕ್ಷಕರಾದ ನಾಗಪ್ಪ ಕೋರೆರಾ, ಮರಿಯಪ್ಪ, ಭಾಸ್ಕರ, ಪರಿಣಿತ, ಶಾರದಮ್ಮ, ಪ್ರಗತಿ, ಸೌಮ್ಯ, ತಸ್ಲೀಮ್, ಮಂಜುನಾಥ್, ರಕ್ಷಿತಾ, ದಿವ್ಯಾ, ಸೌಮ್ಯ, ವಾರ್ಡನ್ ಪೃಥ್ವಿ ಇತರರಿದ್ದರು.