ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಯುವ ಪ್ರತಿಭೆ ಸೂಚನ್ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ.ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶಕರಾಗಿಯೂ ಹೊಸ ಪಯಣ ಬೆಳೆಸಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ಸರಳವಾಗಿ ನೆರವೇರಿದೆ.
ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಸೂಚನ್ ಚೊಚ್ಚಲ ನಿರ್ದೇಶನದ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ನಡೆದಿದೆ.
ಪೂಜೆಯಲ್ಲಿ ಸೂಚನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಮೇ ಮೊದಲ ವಾರದಿಂದ ಗಾಡ್ ಪ್ರಾಮಿಸ್ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಗಾಡ್ ಪ್ರಾಮಿಸ್ ಚಿತ್ರತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಷನ್ ಕರೆಯಲಾಗಿದೆ.
ಇದೇ ತಿಂಗಳ 31ರಂದು ಆಡಿಷನ್ ನಡೆಯುತ್ತಿದೆ. ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್. ಇದೀಗ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಮೊದಲ ಕನಸಿಗೆ ಜೊತೆಯಾಗಿದೆ.