2023ರ ವಿಶ್ವಕಪ್ನ ಲೀಗ್ ಸುತ್ತು ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ಎಲ್ಲಾ ತಂಡಗಳು ತಲಾ 8 ಪಂದ್ಯಗಳನ್ನು ಆಡಿ ಮುಗಿಸಿದ್ದು, ಇದರಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ಗೆ ಅರ್ಹತೆ ಪಡೆದಿವೆ.
ಇದೀಗ ಖಾಲಿ ಉಳಿದಿರುವ ಏಕೈಕ ಸೆಮಿಫೈನಲ್ ಸ್ಥಾನಕ್ಕಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ವಿಶ್ವಕಪ್ನ ಒಂಬತ್ತನೇ ಹಾಗೂ ಅಂತಿಮ ಸುತ್ತಿನ ಪಂದ್ಯಗಳು ಗುರುವಾರದಿಂದ ಆರಂಭವಾಗಲಿವೆ. ಈ ಒಂಬತ್ತನೇ ಸುತ್ತಿನ ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ.
ಈ ಎರಡೂ ತಂಡಗಳು ಲೀಗ್ ಸುತ್ತಿನ ಕೊನೆಯ ಪಂದ್ಯವನ್ನು ಆಡಲಿವೆ. ಈ ಪಂದ್ಯ ಇಂದು ಅಂದರೆ, ನವೆಂಬರ್ 9 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡಕ್ಕೆ ಭಾರಿ ಲಾಭವಾಗಲಿದೆ.