ಮ್ಯಾಂಚೆಸ್ಟರ್ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್ನ 23ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು. ಅದರಂತೆ ಈ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿ ಸೆಮಿಫೈನಲ್ ರೇಸ್ ನಲ್ಲಿ ಜೀವಂತವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17ನೇ ಓವರ್ ನಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಇತ್ತ ಈ ಸೋಲಿನೊಂದಿಗೆ ಬಾಂಗ್ಲಾ ತಂಡ ಸೆಮಿಫೈನಲ್ ರೇಸ್ ನಿಂದ ಭಾಗಶಃ ಹೊರಬಿದ್ದಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತಾದರೂ ಕೇವಲ 5 ಬ್ಯಾಟರ್ ಗಳಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಈ 5 ಬ್ಯಾಟರ್ಗಳು ಉತ್ತಮ ಆರಂಭವನ್ನು ಪಡೆದರಾದರೂ ಯಾರಿಗೂ ಈ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಂಗ್ಲಾದೇಶ ಪರ ಜುವೈರಿಯಾ ಫಿರ್ದೌಸ್ ಅತ್ಯಧಿಕ 33 ರನ್ ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನಿಗರ್ ಸುಲ್ತಾನ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಶೋಭನಾ ಕೂಡ 22 ರನ್ ಗಳ ಕಾಣಿಕೆ ನೀಡಿದರು.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್ ಪಡೆದರೆ ಶ್ರೀ ಚರಣಿ 2 ವಿಕೆಟ್ ಕಬಳಿಸಿದರು. ರೇಣುಕಾ ಸಿಂಗ್ ಠಾಕೂರ್ ಮತ್ತು ನಂದಿನಿ ಶರ್ಮಾ ತಲಾ 1 ವಿಕೆಟ್ ಪಡೆದರು. ಆದಾಗ್ಯೂ ಈ ಪಂದ್ಯದಲ್ಲಿ ಬಾಂಗ್ಲಾ ತಂಡ 100 ರನ್ ಗಳ ಗಡಿ ದಾಟಲು ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣವಾಯಿತು. ಎಂದಿನAತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರ್ತಿಯರು 4 ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದರು. ಹೀಗಾಗಿ ಬಾಂಗ್ಲಾ ತಂಡ 136 ರನ್ ಕಲೆಹಾಕಿತು. ಇಲ್ಲದಿದ್ದರೆ ತಂಡದ ಸ್ಕೋರ್ 100 ರ ಗಡಿ ಕೂಡ ದಾಟುತ್ತಿರಲಿಲ್ಲ.
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ ಸ್ಮೃತಿ ಮಂಧಾನ ಬೇಗನೇ ಔಟಾದರು. ಆದರೆ ಶೆಫಾಲಿ ವರ್ಮಾ ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ 9 ನೇ ಓವರ್ನಲ್ಲಿ ಶೆಫಾಲಿ 53 ರನ್ಗಳಿಗೆ ಔಟಾದರು. ಶೆಫಾಲಿ ಔಟಾಗುತ್ತಿದ್ದಂತೆ ಭಾರತದ ಇನ್ನಿಂಗ್ಸ್ ಇದ್ದಕ್ಕಿದ್ದಂತೆ ಕುಸಿಯಿತು. ಪರಿಣಾಮವಾಗಿ 98 ರ ಹೊತ್ತಿಗೆ ತಂಡವು ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು.
17ನೇ ಓವರ್ ನಲ್ಲಿ ಗೆದ್ದ ಭಾರತ
ಇದರ ಜೊತೆಗೆ ಕ್ರೀಸ್ನಲ್ಲಿ ಬ್ಯಾಟರ್ ಗಳ ನಡುವೆ ಸಮನ್ವಯದ ಕೊರತೆಯೂ ಸ್ಪಷ್ಟವಾಗಿ ಕಾಣುತ್ತಿತ್ತು. ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ರನ್ನಿಂಗ್ ವಿಚಾರದಲ್ಲಿ ಹಲವು ಬಾರಿ ಗೊಂದಲಕ್ಕೀಡಾದರು. ಇದು ರನ್-ಔಟ್ ಅವಕಾಶವನ್ನು ಸೃಷ್ಟಿಸಿತು. ಆದರೆ ಬಾಂಗ್ಲಾದೇಶದ ಫೀಲ್ಡಿಂಗ್ ಕಳಪೆಯಾಗಿದ್ದ ಕಾರಣ ಇವರಿಬ್ಬರು ಔಟಾಗುವುದರಿಂದ ಪಾರಾದರು. ಅಂತಿಮವಾಗಿ, ಟೀಂ ಇಂಡಿಯಾ 16.5 ಓವರ್ಗಳಲ್ಲಿ ಗುರಿ ಸಾಧಿಸಿತು.
IND vs BAN: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಏಕಪಕ್ಷೀಯ ಗೆಲುವು



