ಚಿಕ್ಕಬಳ್ಳಾಪುರ: ಭಾರತದ ಸಮರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮಾಡಿದ ಯಶಸ್ವಿ ಪ್ರಯತ್ನಕ್ಕೆ ನಿನ್ನೆ ಲೋಕಸಭೆಯಲ್ಲಿ ಸೋಲಾಗಿದೆ. ಇದು ಇಂಡಿಯಾ ಕೂಟ ಮತ್ತು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ ಎಂದು ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷೆ ಹಾಗೂ ರಾಜ್ಯ ವಕ್ತಾರರಾದ ಅಶ್ವಿನಿ ಶಂಕರ್ ಹೇಳಿದರು. ನಗರದ ಉತ್ತರ ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ‘ನಾರಿ ಶಕ್ತಿ ವಂದನಾ’ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ
ಪ್ರಜಾಪ್ರಭುತ್ವದ ವ್ಯವಸ್ಥೆಯ ಕರಾಳ ದಿನವಾಗಿದೆ. ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸ್ಟೇಚ್ಛಾಚಾರದಿಂದ ಕಾಂಗ್ರೆಸ್ ಬಳಸಿಕೊಂಡಿದೆ ತಿಳಿಸಿದರು.ಸದ್ಯ ದೇಶದ ರಾಜಕೀಯ ಭೂಪಟದಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿರುವ ಕಾಂಗ್ರೆಸ್ ಪಕ್ಷವು ತನ್ನದೇ ಮನಸ್ಥಿತಿಯ ಇತರ ಪಕ್ಷಗಳನ್ನು ಕಟ್ಟಿಕೊಂಡು ‘ಇಂಡಿ’ ಕೂಟದ ಹೆಸರಿನಲ್ಲಿ ಸ್ತ್ರೀ ಕುಲದ ಹಕ್ಕನ್ನು ಲೋಕಸಭೆಯಲ್ಲಿ ಹಿಂಡಿದೆ. ದುರ್ಯೋಧನ, ದುಶ್ಯಾಸನ, ರಾವಣರ ಸಂಸ್ಕೃತಿ ನೆನಪಿಸುವ ರೀತಿಯಲ್ಲಿ ಸಂಸತ್ ನಲ್ಲಿ ನಡೆದುಕೊಂಡು ಡಾ. ಅಂಬೇಡ್ಕರ್ ಅವರ ಮಹದಾಶಯ, ಅಣ್ಣ ಬಸವಣ್ಣ ಅವರು ಪ್ರತಿಪಾದಿಸಿದ ಲಿಂಗ ಸಮಾನತೆಯನ್ನು ಹತ್ತಿಕ್ಕಲು ಯತ್ನಿಸಿವೆ.ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ನೀಡಿದ್ದರೆ ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಿತ್ತು. ಇದು ಕೇವಲ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಪ್ರಯತ್ನವಲ್ಲ, ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ ಎಂದು ಬಿಂಬಿಸಬಹುದಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮಹಿಳಾ ವಿರೋಧಿ ಧೋರಣೆ ಅನಾವರಣಗೊಂಡಿದೆ.ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳದು ಮಹಿಳೆಯರ ವಿಚಾರದಲ್ಲಿ ಕೇವಲ ಮೊಸಳೆಕಣ್ಣೀರು ಮಾತ್ರ ಅಭಿವೃದ್ಧಿಶೀಲ ರಾಷ್ಟ್ರದ ಪ್ರಯತ್ನದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಚಿಂತನೆಗೆ ಧಕ್ಕೆ ತಂದಿದ್ದಾರೆ.ವಿಪಕ್ಷಗಳು ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿವೆ. ಪ್ರತಿಪಕ್ಷಗಳ ವಿರೋಧವು ಈ ಮಸೂದೆಯ ಅನುಷ್ಠಾನದ ವಿರುದ್ಧವಲ್ಲ, ಬದಲಾಗಿ ಮಹಿಳಾ ಮೀಸಲಾತಿಯ ವಿರುದ್ಧವಾಗಿದೆ. ಮೂರು ಮಸೂದೆಗಳ ಉದ್ದೇಶ ಮಹಿಳಾ ಸಬಲೀಕರಣ. ಒಬ್ಬ ಸಂಸದರು ಒಂದೇ ಕ್ಷೇತ್ರದಲ್ಲಿ ಸುಮಾರು 49 ಲಕ್ಷ ಮತದಾರರನ್ನು ಹೇಗೆ ಪ್ರತಿನಿಧಿಸಬಹುದು. ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯ ಕಾರ್ಯವಿಧಾನಕ್ಕಿಂತ ಹೆಚ್ಚಾಗಿ ಅದರ ವಿಷಯವನ್ನು ವಿರೋಧಿಸಿವೆ.ಮಹಿಳಾ ಮೀಸಲಾತಿ ಪರ ಇದ್ದೇವೆ ಎನ್ನುತ್ತಿದ್ದ ವಿಪಕ್ಷಗಳು ಸಂಸತ್ತಿನಲ್ಲಿ ತಮ್ಮ ಅಸಲಿ ಚಿಂತನೆ ಏನೆಂಬುದನ್ನು ತೋರಿಸಿಕೊಟ್ಟಿವೆ. ನರೇಂದ್ರ ಮೋದಿಜೀ ಅವರು ಮಹಿಳಾ ಸಶಕ್ತಿಕರಣ ಜಾರಿ ಮಾಡಿ 2029ರಲ್ಲಿ ಚುನಾವಣೆ ನಡೆಸುವುದು. ಒಬ್ಬ ವ್ಯಕ್ತಿ ಒಂದು ಮತ ಎಂಬ ಸಿದ್ಧಾಂತವನ್ನು ದೃಢಗೊಳಿಸುವ ಚಿಂತನೆ ಹೊಂದಿದ್ದರು. ನಾರಿ ಶಕ್ತಿಗೆ 2029ಕ್ಕಿಂತ ಮೊದಲು ಅವಕಾಶ ಕೊಡಲು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಿದ್ಧವಿಲ್ಲ ಎಂಬುದು ಸಾಬೀತಾಗಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲೆ ರಾಮಚಂದ್ರಗೌಡ ಮಾತನಾಡಿ, ಮಹಿಳಾ ಸಶಕ್ತಿಕರಣ- ನಳದ ಮೂಲಕ 15 ಕೋಟಿ ಮನೆಗಳಿಗೆ ನೀರು, 10 ಕೋಟಿ ಮನೆಗಳಿಗೆ ಉಜ್ವಲ ಯೋಜನೆಯಡಿ ಸಿಲಿಂಡರ್ ನೀಡಿಕೆ, 12 ಕೋಟಿ ಶೌಚಾಲಯ ನಿರ್ಮಾಣ, 4 ಕೋಟಿಗೂ ಹೆಚ್ಚು ಮಹಿಳೆಯರ ಹೆಸರಿನಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಹಿಂದುಳಿದ ವರ್ಗದ ನಾಯಕ ಮೋದಿಜೀ ಅವರಿಗೆ ವಂಶಪಾರಂಪರ್ಯದಿAದ ಪ್ರಧಾನಿ ಹುದ್ದೆ ಬಂದಿಲ್ಲ, ಅದನ್ನು ಮೂರನೇ ಬಾರಿ ಮತದಾರರು ನೀಡಿದ್ದಾರೆ. ಮೋದಿಯವರ ಸರಕಾರ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಒಬಿಸಿ ಗುರುತಿಸುವಿಕೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಅಧಿಕಾರ ಶಕ್ತಿಕರಣ ಮಾಡಿತ್ತು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಚುನಾವಣೆ ಗೆಲ್ಲುವುದೊಂದೇ ಏಕಮಾತ್ರ ಉದ್ದೇಶ. ಬಿಜೆಪಿಗೆ ರಾಷ್ಟ್ರ ನಿರ್ಮಾಣದ ಚಿಂತನೆ ಇದೆ.ಕಾಂಗ್ರೆಸ್ ಪಕ್ಷವು ಸುಮಾರು ಆರೂವರೆ ದಶಕಗಳ ಕಾಲ ದೇಶದ ಆಡಳಿತದಲ್ಲಿ ಇದ್ದಾಗ ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಿತ್ತು. ಮಂಡಲ್ ವರದಿ ಜಾರಿ ಮಾಡಲು ಹಿಂಜರಿಕೆ ತೋರಿದ ಇವರದು ತೋರಿಕೆಯ ಒಬಿಸಿ ಪ್ರೀತಿ ಎಂಬುದು ಜನರಿಗೆ ಗೊತ್ತಿದೆ. ಇನ್ನು ಮುಂದೆ ಮಹಿಳೆಯರ ಕುರಿತ ಇವರ ಮಾತುಗಳು ಕೇವಲ ತೋರಿಕೆಯದೆಂದು ಹಾಗೂ ತಮ್ಮ ಅವಕಾಶವನ್ನು ಕಾಂಗ್ರೆಸ್ ಪಕ್ಷ ಕಿತ್ತುಕೊಂಡಿದೆ ಎಂದು ಮಹಿಳೆಯರೂ ಅರ್ಥ ಮಾಡಿಕೊಳ್ಳಲಿದ್ದಾರೆ ಹಾಗೂ ಇವರಿಗೆ ಸೂಕ್ತ ಪಾಠ ಕಲಿಸುವ ವಿಶ್ವಾಸವಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಜಿಲ್ಲಾ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಮುರುಳಿಧರ್,ಮಧು ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ಮಾಜಿ ಶಾಸಕ ಎಂ.ರಾಜಣ್ಣ, ಟಿಎಪಿಸಿಎಂಎಸ್ .ಅಧ್ಯಕ್ಷ ಆವಲಕೊಂಡರಾಯಪ್ಪ, ಬಾಲ ಕುಂಟೆ ಗಂಗಾಧರಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಗುಪ್ತಾ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗಂಗರೇ ಕಾಲುವೆ ಪ್ರಸಾದ್, ಮಾಜಿ ಅಧ್ಯಕ್ಷ ಕಾಳೇಗೌಡ, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ,ಅನು ಆನಂದ್, ಜಿಲ್ಲೆಯ ಎಲ್ಲಾ ಮಂಡಲದ ಮಹಿಳಾ ಮೋರ್ಚ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಇದ್ದರು.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮಾಡಿದ ಯಶಸ್ವಿ ಪ್ರಯತ್ನಕ್ಕೆ ಲೋಕಸಭೆಯಲ್ಲಿ ಸೋಲು, ಇದು ಇಂಡಿಯಾ ಕೂಟ ಮತ್ತು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಮಾಡಿದ ಅಪಮಾನ



