ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಸಂಬAಧ ಏಪ್ರಿಲ್ 16ರಂದು ನಡೆಯುವ ಸಚಿವ ಸಂಪುಟದಲ್ಲಿ ಅಧಿಸೂಚನೆಗೆ ಅನುಮೋದನೆ ನೀಡ ಬಾರದೆಂದು ಒತ್ತಾಯಿಸಿ ಇಡೀ ರಾತ್ರಿ ನೂರಾರು ರೈತ ಮಹಿಳೆಯರು ಒನಕೆ ಪ್ರದರ್ಶಿಸಿ ಚಳವಳಿ ನಡೆಸಿದರು.
ಭೈರಮಂಗಲ ಗ್ರಾಮದ ವೃತ್ತದಲ್ಲಿ ಪುಟಾಣಿಗಳ ಆದಿಯಾಗಿ ಮಹಿಳೆಯರು, ವೃದ್ಧೆಯರು ತಾವುಗಳು ತಂದಿದ್ದ ಒನಕೆಗಳಿಗೆ ಹೂವು ಕಟ್ಟಿ, ಕುಂಕುಮ ಹಚ್ಚಿದರಲ್ಲದೆ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದರು.
ಅಲ್ಲದೆ, ಒನಕೆಗಳ ಮೇಲೆ ಮೇಣದ ಬತ್ತಿ ಹಚ್ಚಿ ಪೂಜೆ ಸಲ್ಲಿಸಿದರು. ಆನಂತರ ಮಹಿಳೆಯರು ಒನಕೆಗಳನ್ನು ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರಾಂತ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಪ್ರಸ್ತಾಪವನ್ನು ಸಚಿವ ಸಂಪುಟ ತಿರಸ್ಕರಿಸಬೇಕು. ರಾಜ್ಯ ಸರ್ಕಾರಕ್ಕೆ ಇಂದೊAದು ಅಂತಿಮ ಎಚ್ಚರಿಕೆ. ಕಳೆದೊಂದು ವರ್ಷದಿಂದ ರೈತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಇದನ್ನು ಹಗುರವಾಗಿ ಪರಿಗಣಿಸಿ ಅಂತಿಮ ಅಧಿಸೂಚನೆ ಹೊರಡಿಸಿದರೆ ಚಳವಳಿ ದಿಕ್ಕು ಬದಲಾಗುತ್ತದೆ. ಬಹು ಸಂಖ್ಯಾತ ರೈತರು ಈ ಯೋಜನೆಗೆ ಒಪ್ಪಿಗೆ ನೀಡಿದ್ದರೆ ಶಾಸಕರು ಏಕೆ ಸಭೆ ಕರೆಯುತ್ತಿಲ್ಲ. ಬಲವಂತದ ಭೂ ಸ್ವಾಧೀನಕ್ಕೆ ರೈತರು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ರೈತ ಮಹಿಳೆ ಶ್ವೇತಾ ಮಾತನಾಡಿ, ಭೂಸ್ವಾಧೀನ ಮಾಡದಂತೆ ಆಕ್ಷೇಪಣೆ ಸಲ್ಲಿಸಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಇಲ್ಲಿವರೆಗೂ ಸ್ಪಂದಿಸಿಲ್ಲ. ಇದೆಲ್ಲ ನೋಡಿದರೆ ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ. ಆಡಳಿತ ಪಕ್ಷ ಮಾತ್ರವಲ್ಲ ವಿರೋಧ ಪಕ್ಷದವರು ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅಂತಿಮ ಅಧಿಸೂಚನೆ ಹೊರಡಿಸಿದರೆ ಈ ಒನಕೆಗಳು ವಿಧಾನಸೌಧ ಪ್ರವೇಶಿಸುತ್ತವೆ. ಮಾಡುತ್ತೇವೆ, ಇಲ್ಲ ಮಡಿಯುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಭೈರಮಂಗಳ -ಕಂಚುಗಾರನಹಳ್ಳಿ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಣ್ಣ ಮಾತನಾಡಿ, ರೈತರ ಅಭಿಪ್ರಾಯ ಸಂಗ್ರಹಿಸದೆ ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾಗಿದೆ. ಕೃಷಿ ಭೂಮಿ ಕಸಿದುಕೊಂಡ ಮೇಲೆ ರೈತರಿಗೆ ಏನು ಉದ್ಯೋಗ ಕೊಡುತ್ತಾರೆ. ರೈತರ ವಂಶ ನಾಶ ಮಾಡಲು ಹೊರಟಿದ್ದಾರೆ. ಗೋಲಿಬಾರ್ ಮಾಡಿದರೆ ಎದೆ ಯೊಡ್ಡಲು ರೈತರು ಸಿದ್ದರಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಿನ್ನಪ್ಪ ರೆಡ್ಡಿ, ನಾಗರಾಜು, ಬೈರಮಂಗಲ ಅಶ್ವತ್ಥ್, ಆನಂದ್, ಶ್ರೀನಿವಾಸ್, ರಾಮಚಂದ್ರ, ದೀಪಾ, ವಿಜಯಮ್ಮ, ಆಶಾ, ಶ್ರೀನಿವಾಸ್ ರೆಡ್ಡಿ, ಮಂಜುನಾಥ್, ಅಶ್ವತ್ಥ್, ರಾಧಾಕೃಷ್ಣ, ಶ್ವೇತಾ, ಪ್ರೇಮಾ, ಉಮಾ ಮಹೇಶ್ವರಿ, ಲಕ್ಷಿ÷್ಮ ಮತ್ತಿತರರು ಭಾಗವಹಿಸಿದ್ದರು.
ನೂರಾರು ರೈತ ಮಹಿಳೆಯರಿಂದ ಒನಕೆ ಪ್ರದರ್ಶಿಸಿ ಚಳವಳಿ



