ಚಿಕ್ಕಬಳ್ಳಾಪುರ: ಕಳೆದ 60 ವರ್ಷಗಳಿಂದ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ತರದ ಕಾಂಗ್ರೆಸ್, ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಸೀಟು ಕೊಡುವ ಕಾಂಗ್ರೆಸ್, ವಿಧಾನಸೌಧಕ್ಕೆ ಹೋಗಲು ಸೀಟು ಕೊಡುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿ ವಂದನಾ ಅಧಿನಿಯಮ ತಿದ್ದುಪಡಿ ಮಸೂದೆ ಜಾರಿ ಮಾಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟದ ಸದಸ್ಯರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿ ನೀಡಲಿಲ್ಲ. 1996 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಹಿಳಾ ಮೀಸಲಾತಿ ತರುವ ಪ್ರಯತ್ನ ಮಾಡಿದಾಗ, ಯಾರೂ ಬೆಂಬಲ ಕೊಡಲಿಲ್ಲ. ಇದೇ ರೀತಿ ಅಟಲ್ ಬಿಹಾರಿ ವಾಜಪೇಯಿ ಪ್ರಯತ್ನ ಮಾಡಿದ್ದರು. ಡಾ.ಮನಮೋಹನ್ ಸಿಂಗ್ ಕಾಲದಲ್ಲೂ ರಾಜ್ಯಸಭೆಯಲ್ಲಿ ಮಾತ್ರ ಮಸೂದೆ ಪಾಸ್ ಆಗಿತ್ತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಇತಿಹಾಸ ಎಂದರು. ಮಹಿಳೆಯರಿಗೆ 2,000 ರೂ. ಕೊಟ್ಟರೆ ಸಾಕು, ಅವರಿಗ್ಯಾಕೆ ರಾಜಕಾರಣ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಗೃಹಲಕ್ಷ್ಮೀ ಸಾಕು, ರಾಜಲಕ್ಷ್ಮೀ ಯಾಕೆ ಬೇಕು ಎಂದು ಕಾಂಗ್ರೆಸ್ ಭಾವಿಸಿದೆ. ಒಂದು ಸಮುದಾಯದ ಪ್ರಗತಿಯನ್ನು ಅಳೆಯಬೇಕೆಂದರೆ, ಆ ಸಮುದಾಯದಲ್ಲಿನ ಮಹಿಳೆಯರ ಪ್ರಗತಿಯನ್ನು ಅಳೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಬಿ.ಆರ್.ಅಂಬೇಡ್ಕರ್ ಹಿಂದೂ ಬಿಲ್ ಕೋಡ್ ತಂದಾಗ ಕಾಂಗ್ರೆಸ್ ಅದನ್ನು ವಿರೋಧಿಸಿತ್ತು. ಇದು ಮಹಿಳೆಯರಿಗೆ 33% ಮೀಸಲು ನೀಡುವ ಮಸೂದೆಯಾಗಿದ್ದು, ಇದನ್ನು ಕಾಂಗ್ರೆಸ್ ಯಾಕೆ ವಿರೋಧಿಸುತ್ತಿದೆ? ಎಂದು ಪ್ರಶ್ನಿಸಿದರು. ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಅನಿಲ ಸಂಪರ್ಕ ನೀಡಲಾಗಿದೆ. 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರ ಹೆಸರಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುದ್ರಾ, ಲಕ್ಪತಿ ದೀದಿ ಮೊದಲಾದ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೆರವಾಗಿದೆ. ಇದರ ಜೊತೆಗೆ ರಾಜಕೀಯ ಶಕ್ತಿ ನೀಡಿದ್ದರೆ, ಮಹಿಳೆಯರು ಶಾಸಕರು, ಸಂಸದರು ಆಗುತ್ತಿದ್ದರು. ಇದರಿಂದ ದೊಡ್ಡ ಬದಲಾವಣೆಯಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಸ್ ಸೀಟು ಕೊಟ್ಟರೆ ಸಾಕೆಂದು ಅಂದುಕೊAಡಿದೆ. ಅದರ ಬದಲು ವಿಧಾನಸೌಧದಲ್ಲಿ ಸೀಟು ಕೊಡಬೇಕಿತ್ತು. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಸೀಮಿತ ಎಂದು ಕಾಂಗ್ರೆಸ್ ಅಂದುಕೊAಡಿದೆ. ಮಹಿಳೆಯರು ಸಾಲಿನಲ್ಲಿ ನಿಂತು ಮತ ಮಾತ್ರ ಹಾಕಬೇಕು. ಮತ ಕೊಡಲು ಮಾತ್ರ ಮಹಿಳೆಯರು ಬೇಕು, ಮತ ಪಡೆಯಲು ಮಹಿಳೆಯರಿಗೆ ಅರ್ಹತೆ ಇಲ್ಲವೇ? ಈ ಮಸೂದೆಯ ಸೋಲು ದೇಶದ 70 ಕೋಟಿ ಮಹಿಳೆಯರ ಸೋಲು. ಮಸೂದೆ ಸೋತ ದಿನ ಭಾರತದ ಪ್ರಜಾಪ್ರಭುತ್ವದ ಕರಾಳ ದಿನ ಎಂದರು.ಎಲ್ಲಕ್ಕೂ ವಿರೋಧ ಡಿಎಂಕೆ ಸದಸ್ಯರು ಉತ್ತರ-ದಕ್ಷಿಣ ಎಂದು ವಿಭಾಗ ಮಾಡಿದ್ದಾರೆ. ಈ ಹಿಂದೆ ಸಿಎಎ, 370 ರದ್ದು, ಜಿಎಸ್ಟಿ, ರಾಮಮಂದಿರ ನಿರ್ಮಾಣ, ರಾಷ್ಟ್ರೀಯ ಶಿಕ್ಷಣ ನೀತಿ ಮೊದಲಾದ ಸಂದರ್ಭಗಳಲ್ಲೂ ಇವರು ಹೀಗೆಯೇ ವಿರೋಧ ಮಾಡಿದ್ದರು. ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಇಲ್ಲವಾದರೂ ಯುವಜನರು ಬೀದಿಗೆ ಬರುವಂತೆ ಮಾಡಿದ್ದಾರೆ. ಪ್ರಗತಿಪರ ಚಿಂತನೆಗೆ ಕಾಂಗ್ರೆಸ್ ಯಾವಾಗಲೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟೈಕ್, ಆಪರೇಶನ್ ಸಿಂದೂರ ಮೊದಲಾದ ಸಮಯದಲ್ಲೂ ವಿರೋಧ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ದೇಶದ ಪ್ರಗತಿಗೆ ಕಂಟಕವಾಗಿದ್ದಾರೆ. ಡಿಎಂಕೆ ಜೊತೆ ಕಾಂಗ್ರೆಸ್ ಸ್ನೇಹ ಹೊಂದಿದೆ. ಹಾಗಾದರೆ ಚುನಾವಣೆ ಮುಗಿಯುವ ವೇಳೆಗೆ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗಬಹುದು ಎಂದು ವ್ಯಂಗ್ಯವಾಡಿದರು.2029 ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ತರಬೇಕೆಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ. ಸಂವಿಧಾನದ ವಿಧಿ 82 ರಲ್ಲಿ ಹೇಳಿರುವ ಪ್ರಕಾರ, ಜನಗಣತಿ ಬಳಿಕ ಮರುವಿಂಗಡಣೆಯ ಸಮಿತಿ ರಚಿಸಬೇಕು. ಜನಸಂಖ್ಯೆಯ ಆಧಾರದಲ್ಲೇ ಮರುವಿಂಗಡಣೆ ನಡೆಯಬೇಕೆಂದು ಹೇಳಲಾಗಿದೆ. ಹಾಗೆ ಮಾಡಿದ್ದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿತ್ತು. ಏಕೆಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿ ಆರ್ಥಿಕವಾಗಿ ಸುದೃಢವಾಗಿವೆ. ಐಟಿ ಕ್ಷೇತ್ರದಲ್ಲಿ ಕರ್ನಾಟಕ 40% ಪಾಲು ಹೊಂದಿದೆ. ಆದರೆ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಸಮರ್ಪಕವಾಗಿ ಜಾರಿಯಾಗಿಲ್ಲ. ಜನಸಂಖ್ಯೆಯ ಆಧಾರದಲ್ಲೇ ಮಾಡಿದ್ದರೆ ಕರ್ನಾಟಕದಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಸೂದೆಯಲ್ಲಿ ತಿದ್ದುಪಡಿ ತಂದು ಮತ್ತೆ ಮಂಡಿಸಿದ್ದಾರೆ. ಇದರಿಂದಾಗಿ ಎಲ್ಲ ರಾಜ್ಯಗಳಲ್ಲಿ ಶೇ.50 ರಷ್ಟು ಕ್ಷೇತ್ರ ಹೆಚ್ಚಿಸಲಾಗಿದೆ. ಇದು ಜಾರಿಯಾಗಿದ್ದರೆ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42 ಕ್ಕೆ ಏರುತ್ತಿತ್ತು. ತಮಿಳುನಾಡಲ್ಲಿ 39 ರಿಂದ 59 ಕ್ಕೆ, ಕೇರಳದಲ್ಲಿ 20 ರಿಂದ 30 ಕ್ಕೆ ಏರಿಕೆಯಾಗುತ್ತಿತ್ತು ಎಂದರು. ಜಿಬಿಎ ರಚನೆಯಲ್ಲಿ ಮತ ತಾರತಮ್ಯಬೆಂಗಳೂರಿನ ಆಡಳಿತಕ್ಕೆ ಜಿಬಿಎ ರಚಿಸಿದ ಕಾಂಗ್ರೆಸ್ ಸರ್ಕಾರ ಐದು ಪಾಲಿಕೆಗಳನ್ನು ರಚಿಸಿದ್ದು, ವಾರ್ಡ್ಗಳ ಸಂಖ್ಯೆ 198 ರಿಂದ 369 ಆಗಿದೆ. ಕೊತ್ತನೂರು ವಾರ್ಡ್ನಲ್ಲಿ 10,926 ಮತದಾರರಿದ್ದರೆ, ರಾಜರಾಜೇಶ್ವರಿನಗರ ವಾರ್ಡ್ನಲ್ಲಿ 49,530 ಮತದಾರರಿದ್ದಾರೆ. ಇದರಿಂದಾಗಿ ಒಂದು ಮತ ಒಂದು ಮೌಲ್ಯ ಎಂಬ ತತ್ವಕ್ಕೆ ಧಕ್ಕೆಯಾಗಿದೆ. ಇದೇ ರೀತಿ ದೇಶದ ವಿವಿಧ ಕ್ಷೇತ್ರಗಳಲ್ಲೂ ತಾರತಮ್ಯವಾಗಿದೆ. ಸುಷ್ಮಾ ಸ್ವರಾಜ್, ಉಮಾ ಭಾರತಿ, ವಸುಂಧರಾ ರಾಜೇ, ಆನಂದಿ ಬೆನ್ ಪಟೇಲ್, ರಾಷ್ಟ್ರಪತಿ ದ್ರೌಪದಿ ಮುರ್ಮು ಹೀಗೆ ಅನೇಕ ಮಹಿಳೆಯರಿಗೆ ಬಿಜೆಪಿಯಿಂದ ಉನ್ನತ ಹುದ್ದೆಗಳ ಅವಕಾಶ ನೀಡಲಾಗಿದೆ. 60 ವರ್ಷ ಮಹಿಳೆಯರ ಬಗ್ಗೆ ಕರುಣೆ ತೋರಿದ ಕಾಂಗ್ರೆಸ್, ಮಹಿಳಾ ಮೀಸಲಾತಿಯನ್ನು ವಿರೋಧ ಮಾಡಿ ಮುಖವಾಡ ಕಳಚಿಕೊಂಡಿದೆ. ಒಬಿಸಿ ಬಗ್ಗೆ ಮಾತಾಡುವ ರಾಹುಲ್ ಗಾಂಧಿಯವರು ಮಂಡಲ್ ವರದಿಯನ್ನು ವಿರೋಧಿಸಿದ್ದು ಯಾರೆಂದು ಹೇಳಬೇಕಿದೆ. ಈ ಹಿಂದೆ ಯುಪಿಎ ಹತ್ತು ವರ್ಷ ಆಡಳಿತದಲ್ಲಿದ್ದರೂ ಜಾತಿ ಸಮೀಕ್ಷೆ ಯಾಕೆ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ನ ಈ ಧೋರಣೆಯಿಂದಾಗಿ ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸಂಪೂರ್ಣವಾಗಿ ಸೋಲಲಿದೆ. ನಾಡಿನ ಮಹಿಳೆಯರು ತಮ್ಮ ಶಕ್ತಿಯನ್ನು ಕಾಂಗ್ರೆಸ್ಗೆ ತೋರಿಸಬೇಕಿದೆ. ಮಹಿಳೆಯರಿಗೆ 2,000 ರೂ. ನೀಡಿ ಅಲ್ಪತೃಪ್ತರನ್ನಾಗಿ ಇರಿಸಬೇಕೆಂಬ ಸಂಚನ್ನು ಕಾಂಗ್ರೆಸ್ ಮಾಡಿದೆ. ಇದನ್ನು ಮಹಿಳೆಯರು ವಿರೋಧಿಸಬೇಕು ಎಂದರು.
ನಾರಿ ಶಕ್ತಿ ವಂದನಾ ಅಧಿನಿಯಮ ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್, ಮತ ಕೊಡಲು ಮಾತ್ರ ಮಹಿಳೆಯರು ಬೇಕಾ?: ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ಕಾಂಗ್ರೆಸ್ ಉಚಿತ ಬಸ್ ಸೀಟು ಕೊಡುತ್ತಾರೆ, ವಿಧಾನಸೌಧದಲ್ಲಿ ಸೀಟು ಕೊಡಲ್ಲ



