ಬೆಂಗಳೂರು: 2028ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಆಖಾಡ ಸಿದ್ಧವಾಗುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡು, ಸದ್ಯ ವಿಪಕ್ಷದ ಸ್ಥಾನವನ್ನು ಅಲಂಕರಿಸಿರುವ ಬಿಜೆಪಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ರೆ, ಇತ್ತ ಅಧಿಕಾರದಲ್ಲಿರುವ ಕಾಂಗ್ರೆಸ್, ಅಧಿಕಾರದ ಗದ್ದುಗೆಯಲ್ಲಿ ಮುಂದುವರೆಯುವ ವಾತಾವರಣ ಸೃಷ್ಠಿಸಿಕೊಳ್ಳಲು ಈಗಿನಿಂದಲೇ ತಾಲೀಮು ಆರಂಭಿಸುತ್ತಿದೆ. ಅಲ್ಲಿ ಇವರು, ಇಲ್ಲಿ ಅವರು, ಕಳೆದುಕೊಂಡಲ್ಲಿಯೇ ಹುಡುಕಲು ವೇದಿಕೆ ಸೃಷ್ಠಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಏನಿದು ಕಥೆ? ಎನ್ನುವುದೇ ಕುತೂಹಲ.ಮೊದಲಿಗೆ ಬಿಜೆಪಿಯ ಬಗ್ಗೆ ಹೇಳುವುದಾದರೆ, 2028ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ವಿಜಯೇಂದ್ರ, ಈಗಾಗಲೇ ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪಾದಯಾತ್ರೆ ಮಾಡಿ ಯಶಸ್ವಿಯಾಗಿದ್ದಾರೆ. ಇತ್ತ ಬಿ.ನಾಗೇಂದ್ರ ವಿರುದ್ಧ ತೊಡೆ ತಟ್ಟಿ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿ ಗೆದ್ದಿದ್ದಾರೆ. ಈಗ 2028 ರಲ್ಲಿ ಅಧಿಕಾರ ಹಿಡಯುವ ಸಲುವಾಗಿ, ಮುಂದೆ ಬರುವ ಅಕ್ಟೋಬರ್ 1 ರಿಂದ ಸೇವಾ ಸಂಕಲ್ಪ ಅಭಿಯಾನದ ಮೂಲಕ ರಾಜ್ಯ ಪ್ರವಾಸ ಆರಂಭಿಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಸುಪ್ರಸಿದ್ಧ ಐತಿಹಾಸಿಕ ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ, ವಿಜಯದ ಮಾಲೆ ತೊಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೋಲಾರದ ಕುರುಡುಮಲೆ ಗಣೇಶ ವಿಶೇಷವಾಗಿ ಯಶಸ್ಸು ಕೊಡುವ, ವಿಜಯಮಾಲೆಯನ್ನು ತೊಡೆಸುವ ನಂಬಿಕೆಗೆ ಆರ್ಹವಾದ ಸ್ಥಳ. ಇಲ್ಲಿಂದಲೇ ವಿಜಯೇಂದ್ರ ತನ್ನ ಯಾತ್ರೆ ಆರಂಭಿಸುತ್ತಿದ್ದು, ಎಲ್ಲೆಲ್ಲಿ ಬಿಜೆಪಿ 2023 ರಲ್ಲಿ ಪರಾಭವಗೊಂಡಿತ್ತೋ, ಅಲ್ಲೆಲ್ಲಾ ಅಧಿಕಾರ ಹಿಡಿಯುವ ವಾತಾವರಣ ನಿರ್ಮಿಸಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅಕ್ಟೋಬರ್ 1 ರಿಂದ ಪ್ರವಾಸ ಆರಂಭ ಮಾಡಲು ಮುಂದಾಗಿದ್ರೆ, ಇತ್ತ ಬಿ.ಎಸ್.ಯಡಿಯೂರಪ್ಪ, ನವರಾತ್ರಿಯ ವಿಜಯದಶಮಿಯ ದಿನ ಪ್ರವಾಸ ಆರಂಭಿಸುತ್ತಿದ್ದಾರೆ. ಅವರ ಸ್ಥಳ ಎಲ್ಲಿಂದ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಹೀಗೆ ಬಿಜೆಪಿ ಕಳೆದುಕೊಂಡಿರುವ ಕಡೆಯಿಂದಲೇ ತನ್ನ ಪ್ರವಾಸ ಶುರು ಮಾಡುತ್ತಿದೆ.ಇನ್ನು ಈಗ ಕಾಂಗ್ರೆಸ್ ಬಗ್ಗೆ ನೋಡುವುದಾದರೆ, ನಾಳೆಯಿಂದ ಭಾರತ್ ಜೋಡೋ 2.0 ಆರಂಭವಾಗುತ್ತಿದೆ. ಕಾಂಗ್ರೆಸ್ 2023 ರಲ್ಲಿ ರಾಜ್ಯದ 84 ವಿಧಾನಸಭಾ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದು, ಅದನ್ನೇ ಈಗ ಟಾರ್ಗೆಟ್ ಮಾಡಿಕೊಂಡಿದೆ. ಅದರ ಭಾಗವಾಗಿ ಈಗ ಮೊದಲಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಕಳೆದ ಬಾರಿ ಕಳೆದುಕೊಂಡ ಕ್ಷೇತ್ರಗಳನ್ನೇ ಕಾಂಗ್ರೆಸ್ ಈ ಬಾರಿ ವಶಕ್ಕೆ ಪಡೆಯುವ ಯತ್ನ ಆರಂಭಿಸುತ್ತಿದೆ. ಈ ಮೂಲಕ, ಅಲ್ಲಿ ಇವರು, ಇಲ್ಲಿ ಅವರು. ಕಳೆದುಕೊಂಡಲ್ಲಿಯೇ ಹುಡುಕಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ.