ರಾಮನಗರ: ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆಗಳ ನಡುವೆ ಉದಯಿಸಿರುವ ಜೆನ್ ಝಿ ಯುವಜನರ ಹೋರಾಟವು ಹೊಸ ಭರವಸೆಯ ಆಶಾಕಿರಣ ಮೂಡಿಸಿದೆ. ಅವರ ಸಿದ್ದಾಂತ ಏನಿರಬೇಕೆಂಬ ಚರ್ಚೆಯೂ ನಡೆಯುತ್ತಿದೆ. ನನ್ನ ಪ್ರಕಾರ ಅವರಿಗೆ ಸಂವಿಧಾನವೇ ಸಿದ್ದಾಂತವಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳು ಶನಿವಾರ ಭಾನುವಾರ ಹಮ್ಮಿಕೊಂಡಿರುವ ಎರಡು ದಿನಗಳ `ಸಂವಿಧಾನ ಓದು ಅಧ್ಯಯನ ಶಿಬಿರ’ದ ಉದ್ಘಾಟನಾ ಸಮಾರಂಭದಲ್ಲಿ `ಸಂವಿಧಾನ ರಚನೆ ಮತ್ತು ಮೂಲತತ್ವಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.ಶಕ್ತಿ, ತ್ಯಾಗ, ಅನ್ಯಾಯದ ವಿರುದ್ಧದ ಗಟ್ಟಿ ದನಿಯ ಪ್ರತೀಕವೇ ಯುವಶಕ್ತಿ. ಅವರಿಗೆ ನಮ್ಮ ಸಂವಿಧಾನವೇ ತತ್ವ, ಸಿದ್ದಾಂತ ಹಾಗೂ ದಾರಿಯಾಗಲಿ. ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕೆ ಶ್ರಮಿಸಲಿ. ಆಗಷ್ಟೇ ಯುವಜನರು ಹಾಗೂ ನಾವೆಲ್ಲರೂ ಬಯಸುವ ಕನಸಿನ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ದೇಶದ ಆಡಳಿತ ಯಂತ್ರ ಸ್ವೇಚ್ಛಾಚಾರ ಮಾಡಬಾರದೆಂಬ ಕಾರಣಕ್ಕೆ ಸಂವಿಧಾನ ರೂಪಿಸಿದವರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗೆ ತಮ್ಮದೇ ಆದ ಕರ್ತವ್ಯದ ಗಡಿಗಳನ್ನು ಗುರುತಿಸಿ ನೀತಿ-ನಿಯಮಗಳನ್ನು ರೂಪಿಸಿದರು. ಯಾವ ಅಂಗವೂ ತಮ್ಮ ವ್ಯಾಪ್ತಿ ಮೀರುವಂತಿಲ್ಲ ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಎಲ್ಲರಿಗೂ ಸಮಾನ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಕೊಟ್ಟಿರುವ ಸಂವಿಧಾನ ಅರ್ಥವಾಗಬೇಕಾದರೆ ಮೊದಲು ನಾವು ಭಾರತವನ್ನು ಅರಿಯಬೇಕು. ಆ ಹಿನ್ನೆಲೆಯಲ್ಲಿ ಸಂವಿಧಾನವನ್ನು ಎಲ್ಲರಿಗೂ ತಲುಪಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಅಭಿಯಾನ ಮಾಡುತ್ತಿದೆ. ಸಡಿಲವಾಗುತ್ತಿರುವ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸ ಬೇಕಾದರೆ ಸಂವಿಧಾನ ಪ್ರಜ್ಞೆ ಅಗತ್ಯ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಭಿಯಾನದ ಸಂಚಾಲಕ ಬಿ. ರಾಜಶೇಖರಮೂರ್ತಿ, `ಸುಭದ್ರ ಹಾಗೂ ಪ್ರಗತಿಪರ ಭಾರತ ಕಟ್ಟುವ ಕನಸಿನೊಂದಿಗೆ ಸಂವಿಧಾನದ ಸಾಕ್ಷರತೆ ಮೂಡಿಸಲು 2018ರಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಸಂವಿಧಾನ ಓದು ಅಭಿಯಾನ ಶುರುವಾಯಿತು’ ಎಂದರು.
ಅಭಿಯಾನದ ಹಿನ್ನೆಲೆಯಲ್ಲಿ ದಾಸ್ ಅವರು ಬರೆದಿರುವ ಸಂವಿಧಾನ ಓದು ಕೃತಿಯು ಸುಮಾರು 25 ಲಕ್ಷ ಪ್ರತಿಗಳು ಇದುವರೆಗೆ ಮಾರಾಟವಾಗಿವೆ. ಹಿಂದಿ, ಇಂಗ್ಲಿಷ್ ಸೇರಿದಂತೆ ದೇಶದ 9 ಭಾಷೆಗಳಿಗೆ ಅನುವಾದಗೊಂಡಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿ ಧಾನ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿ ಅರಿವು ಮೂಡಿದಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪಯ್ಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣೆಗೆರೆ ಕೆ. ಮಲ್ಲಯ್ಯ, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ ನಡುವಿನಮಠ, ಅಕ್ಷಯ್ ಪಬ್ಲಿಕ್ ಸ್ಕೂಲ್ ನಿರ್ದೇಶಕ ಎಂ.ಎ. ಕರಣ್ ಆನಂದ್, ಬೇತೆಲ್ ಪಿಯು ಕಾಲೇಜು ಪ್ರಾಂಶುಪಾಲೆ ರೀಟಾ ಮನು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣೆಗೆರೆ ಕೆ. ಮಲ್ಲಯ್ಯ ವೇದಿಕೆಯಲ್ಲಿದ್ದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು ಸ್ವಾಗತಿಸಿದರು. ವಿದ್ಯಾರ್ಥಿ ಮುಖಂಡರಾದ ವಿಜಯಕುಮಾರ್ ಟಿ.ಎಸ್ ನಿರೂಪಣೆ, ಚಿರಾಗ್ ಎಸ್.ಕೆ, ದೀಪಿಕಾ ಎಚ್.ಎಸ್ ಹಾಗೂ ನಮ್ಮವರು ಬಳಗದ ಪದ್ಮರೇಖಾ ಗೋಷ್ಠಿಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಯಿತು. ನಮ್ಮವರು ಬಳಗದ ಎಚ್.ಡಿ. ಉಮಾಶಂಕರ್, ಅಂಕನಹಳ್ಳಿ ಪಾರ್ಥ, ಕೃಷ್ಣ ಎಸ್. ಹಾಗೂ ಇತರರು ಪಾಲ್ಗೊಂಡಿದ್ದರು.