ಚಾಮರಾಜನಗರ: ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಜಿಲ್ಲೆಗೆ 593 ಮನೆಗಳು ಮಂಜೂರಾಗಿದ್ದು, ಆದಿವಾಸಿಗಳ ಮನೆ ನಿರ್ಮಾಣ ಕಾಮಗಾರಿ ಸೇರಿದಂತೆ ಮೂಲಸೌಲಭ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಜಿಲ್ಲೆಯ ಆದಿವಾಸಿಗಳಿಗೆ ಮನೆ ನಿರ್ಮಾಣ ಸಂಬAಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮುಂದಿನ ಪ್ರಕ್ರಿಯೆಗಳ ಕುರಿತು ಎಲ್ಲಾ ಶಾಸಕರ ಸಮ್ಮುಖದಲ್ಲಿ ವ್ಯಾಪಕವಾಗಿ ಚರ್ಚಿಸಿದರು. ಸರ್ಕಾರವು 2025-26ನೇ ಸಾಲಿನ ಆಯವ್ಯಯದಲ್ಲಿ ಅರಣ್ಯ ಹಾಗೂ ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಜನರಿಗೆ ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಘೋಷಣೆ ಮಾಡಿತ್ತು. ಈ ಸಂಬಂಧ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತದಿಂದ ಆದಿವಾಸಿಗಳ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತುತ ಚಾಮರಾಜನಗರ ಜಿಲ್ಲೆಗೆ ಮೊದಲ ಹಂತದಲ್ಲಿ 593 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ ಎಂದರು. ನಿವೇಶನ ಲಭ್ಯವಿದ್ದು ಮನೆ ಇಲ್ಲದ ಕುಟುಂಬಗಳು ಹಾಗೂ ನಿವೇಶನ ಮತ್ತು ಮನೆ ಎರಡೂ ಇಲ್ಲದ ಕುಟುಂಬಗಳ ತಾಲೂಕುವಾರು ಜಿಲ್ಲೆಯಲ್ಲಿ 2995 ಮನೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 593 ಮನೆಗಳ ನಿರ್ಮಾಣ ಜಿಲ್ಲೆಗೆ ನಿಗದಿಯಾಗಿದೆ. ಮಂಜೂರಾಗಿರುವ ಮನೆಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕಿದೆ. ಮನೆ ನಿರ್ಮಾಣ ಉಸ್ತುವಾರಿಯನ್ನು ರಾಜೀವಗಾಂಧಿ ವಸತಿ ನಿಗಮಕ್ಕೆ ವಹಿಸಲಾಗಿದೆ ಎಂದರು.ಮುಖ್ಯವಾಗಿ ಸೂರಿಗಾಗಿ ತುಂಬಾ ಅಗತ್ಯವಿರುವ ಕುಟುಂಬವನ್ನು ಗುರುತಿಸಬೇಕಿದೆ. ಶಿಥಿಲಾವಸ್ಥೆಯಲ್ಲಿರುವ ಮನೆಗಳ ಮರು ನಿರ್ಮಾಣಕ್ಕೆ ಅದ್ಯತೆ ನೀಡಬೇಕಿದೆ. ಭೂತಾಣಿಪೋಡು, ಬೇಡಗುಳಿ, ಹೊಸಪೋಡು, ಕೆ. ಗುಡಿ ಸೇರಿದಂತೆ ಕೆಲ ಹಾಡಿ-ಪೋಡುಗಳಲ್ಲಿ ಆದಿವಾಸಿಗಳಿಗೆ ಮನೆ ತುರ್ತಾಗಿ ಆಗಬೇಕಿದೆ. ಅರಣ್ಯದಂಚಿನ ಕೆಲ ಹಾಡಿಗಳ ಆದಿವಾಸಿಗಳಿಗೆ ಜಾಗದ ಅಸೆಸ್‌ಮೆಂಟ್ ಇನ್ನೂ ಲಭ್ಯವಾಗಿಲ್ಲ. ಸಂಬಂಧಪಟ್ಟ ಗ್ರಾಮಪಂಚಾಯಿತಿಗಳಿಂದ ಅಸೆಸ್‌ಮೆಂಟ್ ವಿತರಿಸಲು ಅಧಿಕಾರಿಗಳು ಕ್ರಮ ವಹಿಸುವಂತೆ ಉಸ್ತುವಾರಿ ಸಚಿವರು ಸೂಚಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರುಗಳೊಂದಿಗೆ ಜಿಲ್ಲೆಗೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಾಗಿದೆ. ಅಲ್ಲದೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮುಖ್ಯವಾಗಿ ಆದಿವಾಸಿಗಳು ವಾಸಿಸುವ ವ್ಯಾಪ್ತಿಯೊಳಗೆ ಉತ್ತಮ ಮನೆ ಕಟ್ಟಿಕೊಳ್ಳುವ ಕಾಮಗಾರಿ ಸೇರಿದಂತೆ ಇತರೆ ಮೂಲಸೌಲಭ್ಯ ಕಲ್ಪಿಸಲು ತೊಂದರೆಯಾಗದAತೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಸಚಿವರು ತಿಳಿಸಿದರು.ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಅರಣ್ಯ ಹಕ್ಕು ಕಾಯ್ದೆಗಳು ಹಿಂದಿನ ದಿನಗಳಲ್ಲಿ ಪ್ರಭಾವಿಯಾಗಿರಲಿಲ್ಲ. ಈಗ ಸಾಕಷ್ಟು ಕಠಿಣವಾಗಿವೆ. ಆದಿವಾಸಿಗಳ ಮನೆ ನಿರ್ಮಾಣ ಕಾರ್ಯ ಯಾವುದೇ ಅಡೆತಡೆಗಳಿಲ್ಲದೇ ಸುಸೂತ್ರವಾಗಿ ಆಗಬೇಕು ಎಂದರು.ಲೋಕಸಭಾ ಸದಸ್ಯರಾದ ಸುನೀಲ್‌ಬೋಸ್, ಶಾಸಕರಾದ ಎಚ್.ಎಂ. ಗಣೇಶ್‌ಪ್ರಸಾದ್, ಎಂ.ಆರ್. ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಧಿಕಾರಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ, ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂಧ್ಯಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ವೆಂಕಟೇಶ್, ತಹಶೀಲ್ದಾರರಾದ ಬಿ. ಗಿರಿಜಾ, ಬಸವರಾಜು, ಚೈತ್ರಾ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.