ಚಾಮರಾಜನಗರ: ವಿಬಿಜಿ ರಾಮ್ ಜಿ ಯೋಜನೆಯಡಿ ಜಿಲ್ಲೆಯ 9 ಕಲ್ಯಾಣಿಗಳ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ಉಳಿದ ಕಲ್ಯಾಣಿಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಪುನಶ್ಚೇತನ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಡಿ.ಸಿ. ಶೃತಿ ಅವರು ಎಂದು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಹಳೆ ಕೆಡಿಪಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಹಾಗೂ ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ (ಎಫ್.ಇ.ಎಸ್) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕದ ಕಲ್ಯಾಣಿಗಳ ಸಂರಕ್ಷಣೆ, ಪುನಶ್ವೇತನ ಮತ್ತು ಸಮರ್ಪಕ ನಿರ್ವಹಣೆಯ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕಲ್ಯಾಣಿಗಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಮುದಾಯಗಳು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವವನ್ನು ಬಲಪಡಿಸುವುದು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಶೃತಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಎಫ್.ಇ.ಎಸ್ ಸಂಸ್ಥೆಯ ವಿಜಯನಗರ ಜಿಲ್ಲೆಯ ಹಿರಿಯ ಯೋಜನಾ ವ್ಯವಸ್ಥಾಪಕರಾದ ವಾಸುದೇವ ಮೂರ್ತಿ ಹಾಗೂ ಚಾಮರಾಜನಗರ ಜಿಲ್ಲಾ ಸಂಯೋಜಕರಾದ ಎಸ್. ಶಾಂತರಾಜು ಅವರು ಕಲ್ಯಾಣಿಗಳು ಅಂತರ್ಜಲ ಮರುಪೂರಣಕ್ಕೆ ಪೂರಕವಾಗಿರುವುದರ ಜೊತೆಗೆ ಗ್ರಾಮೀಣ ಜನರ ಸಾಂಸ್ಕೃತಿಕ ಆಚರಣೆಗಳು, ಧಾರ್ಮಿಕ ಸಂಪ್ರದಾಯಗಳು ಹಾಗೂ ದೇವಸ್ಥಾನಗಳ ಪೂಜಾ ಕೈಂಕರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಸಂರಕ್ಷಣೆ ಮುಖ್ಯವಾಗಿವೆ ಎಂದು ತಿಳಿಸಿದರು.
ಕಲ್ಯಾಣಿಯಂತಹ ಪಾರಂಪರಿಕ ಜಲಮೂಲಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದ್ದು, ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಮುದಾಯಗಳು ಪರಸ್ಪರ ಸಹಕಾರದೊಂದಿಗೆ ಶ್ರಮದಾನದ ಮೂಲಕ ಕಲ್ಯಾಣಿಗಳ ಸ್ವಚ್ಛತೆ, ಪುನಶ್ವೇತನ ಹಾಗೂ ನಿರಂತರ ನಿರ್ವಹಣೆಗೆ ಮುಂದಾಗಬೇಕು ಎಂದು ಅವರು ತಿಳಿಸಿದರು.ಅಲ್ಲದೆ ವಿಬಿಜಿ ರಾಮ್ ಜಿ ಯೋಜನೆ ಯಡಿ ಕಲ್ಯಾಣಿಗಳ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅಂತರ್ಜಲ ವೃದ್ಧಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಗ್ರಾಮ ಪಂಚಾಯಿತಿ ಮಹತ್ವದ ಕೊಡುಗೆ ನೀಡಬಹುದು ಎಂದು ವಾಸುದೇವಮೂರ್ತಿ, ಎಸ್. ಶಾಂತರಾಜು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದಶಿಗಳಾದ ಶ್ರೀಕಂಠರಾಜೇ ಅರಸ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರಿಧರ್, ಉಮೇಶ್, ಷಣ್ಮುಗ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.