LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ಚಾಮರಾಜನಗರ ದಸರಾ ಮಹೋತ್ಸವ: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ


ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಜನಾಕರ್ಷಣೆಗೆ ಹಮ್ಮಿಕೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳಿಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿಂದು ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವತಿಯಿಂದ ನಗರದಲ್ಲಿ ರೈತ ದಸರಾ, ಫಲಪುಷ್ಪ ಪ್ರದರ್ಶನ, ಶ್ವಾನದಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಹೆಲಿ ರೈಡ್ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮೊದಲಿಗೆ ರೈತ ದಸರಾ ಅಂಗವಾಗಿ ಪಶುಪಾಲನಾ ಇಲಾಖೆ ಹಾಗೂ ಚಾಮರಾಜನಗರ ಹಾಲು ಒಕ್ಕೂಟ ಸಹಯೋಗದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಮಾಡಿದರು.  ಇದೇ ವೇಳೆ ಮಾತನಾಡಿದ ಅವರು ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲಿಯೂ ಮೂರು ದಿನಗಳ ಕಾಲ ಜಿಲ್ಲಾ ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ನಾವೆಲ್ಲಾ ರೈತರು, ರೈತರ ಮಕ್ಕಳು, ವ್ಯವಸಾಯವನ್ನೇ ನಂಬಿ ಬದುಕುವವರು. ಚಾಮರಾಜನಗರ ಜಿಲ್ಲೆ ವಿಶೇಷ ಹಾಗೂ ವಿಭಿನ್ನ ಮಣ್ಣಿನ ಗುಣಲಕ್ಷಣಗಳನ್ನು ಹೊಂದಿದೆ. ರೈತರನ್ನು ಉತ್ತೇಜಿಸಲು ಸರ್ಕಾರದಿಂದ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಬಳಿಕ ಶ್ವಾನ ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ನಿಯತ್ತು ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನಗಳು. ನಾಯಿ ಬಹಳ ಸೂಕ್ಷ್ಮ ಪ್ರಾಣಿ. ಮನುಷ್ಯನ ಕಣ್ಣಿಗೆ ಕಾಣದ್ದು ನಾಯಿ ಕಣ್ಣಿಗೆ ಕಾಣಲಿದೆ. ನಾಯಿಗಳು ಹವಾಮಾನ ವೈಪರೀತ್ಯಗಳನ್ನು ಸಹ ಸೂಕ್ಷ್ಮ ವಾಗಿ ಗ್ರಹಿಸಬಲ್ಲವು. ನಾಯಿ ಸಾಕುವವರು ಬುದ್ದಿವಂತರಾಗಿರಬೇಕು. ನಾಯಿಗಳಿಂದ ಮಕ್ಕಳಿಗೆ ಅಪಾಯ ಎದುರಾಗದಂತೆ ಎಚ್ಚರ ವಹಿಸಬೇಕು. ರೇಬಿಸ್ ನಿಯಂತ್ರಣದ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಶ್ವಾನ ಪ್ರದರ್ಶನ ಎರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನ ಪರಂಪರೆಯಾಗಿದೆ. ಅದನ್ನು ಚಾಮರಾಜನಗರದಲ್ಲಿಯೂ ಮುಂದುವರಿಸುವ ಮೂಲಕ ಈ ಬಾರಿಯ ದಸರಾ ಉತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನ ಪ್ರದರ್ಶನದ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸಲಾಗುತ್ತಿದೆ. ದೇಶಕ್ಕೆ ಇದು ಹೆಮ್ಮೆಯ ವಿಷಯವಾಗಿದೆ ಎಂದರು. ಇದೇ ವೇಳೆ ಅರಣ್ಯ ಇಲಾಖೆಯ ಶ್ವಾನದಳದಿಂದ ಅರಣ್ಯ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ಕುರಿತು ಪ್ರಾತ್ಯೆಕ್ಷಿಕೆ ನಡೆಯಿತು.ಬಳಿಕ ರೈತ ದಸರಾ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಡೊಳ್ಳುಕುಣಿತ, ಮರಗಾಲು ಕುಣಿತ, ಚಂಡೆವಾದ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಲಂಕೃತ ಎತ್ತಿನಗಾಡಿಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ನಂತರ ಜಿಲ್ಲಾಡಳಿತ ಭವನದ ಆವರಣಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಲ್ಲದೆ ಫಲಪುಷ್ಪ ಪ್ರದರ್ಶನ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ರಚಿಸಲಾಗಿರುವ ಚಾಮುಂಡಿ ತಾಯಿಯ ಮಣ್ಣಿನ ಕಲಾಕೃತಿಯನ್ನು ವೀಕ್ಷಿಸಿದರು. ಬಳಿಕ ಜಿಲ್ಲಾಡಳಿತ ಭವನ ಪ್ರವೇಶದ್ವಾರದ ಒಳಾವರಣದಲ್ಲಿ ರಾಶಿಪೂಜೆ ನೆರವೇರಿಸುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.ತದನಂತರ ದಸರಾ ಪ್ರಯುಕ್ತ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಹೆಲಿ ರೈಡ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಸ್ವತಹ ಹೆಲಿ ರೈಡ್ ಮಾಡುವ ಮೂಲಕ ಹೆಲಿ ಟೂರಿಸಂ ಅನ್ನು ಪ್ರೋತ್ಸಾಹಿಸಿದರು. ಸಚಿವರೊಂದಿಗೆ ಶಾಸಕರು, ಜಿಲ್ಲಾಧಿಕಾರಿಗಳು ಹೆಲಿ ರೈಡ್ ಮಾಡಿ ಇಡೀ ಜಿಲ್ಲೆಯನ್ನು ಒಂದು ಸುತ್ತು ಸುತ್ತಿ ಬಂದು ತಮ್ಮ ಖುಷಿಯ ಕ್ಷಣಗಳನ್ನು ಅನುಭವಿಸಿದರು.ಇದೇ ಸಂದರ್ಭದಲ್ಲಿ ಸಚಿವರೊಂದಿಗೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚಿವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಇತರರು ಪಾಲ್ಗೊಂಡಿದ್ದರು. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST