ಸಾಂಸ್ಕೃತಿಕ ನಗರಿ ಬೆಂಗಳೂರಿನಲ್ಲಿ ವಿದುಷಿ ಶ್ರೀಮತಿ ಟಿ. ಎಸ್. ವಸುಂಧರಾ ಅವರಿಗೆ ವಿಶೇಷ ಸ್ಥಾನವಿದೆ. ಸಂಗೀತ ಕುಟುಂಬದಿಂದ ಬಂದ ಅವರ ಹಿರಿಯ ಸಹೋದರಿ ವಿದುಷಿ ಟಿ. ಎಸ್. ವಸಂತ ಮಾಧವಿ ಮತ್ತು ಕಿರಿಯ ಸಹೋದರಿ ಡಾ. ಟಿ. ಎಸ್. ಸತ್ಯವತಿ ಅವರೂ ಹೆಸರಾಂತ ಸಂಗೀತಜ್ಞರಾಗಿರುವುದು ವಿಶೇಷ. ತಮ್ಮ ಹದಿನೆಂಟನೆಯ ವಯಸ್ಸಿನಿಂದಲೂ ಸಂಗೀತದ ಸೇವೆಯಲ್ಲಿರುವ ವಸುಂಧರಾ ಈ ವರೆಗೆ ಸಾವಿರಾರು ಆಸಕ್ತರಿಗೆ ಸಂಗೀತದ ಮಾರ್ಗದರ್ಶನ ಮಾಡಿದ್ದಾರೆ. ಅವರ ವಿದ್ಯಾರ್ಥಿಗಳೇ ಪ್ರೀತಿಯಿಂದ ಹೆಸರಿಟ್ಟ “ ವಸುಂಧರಾ ಸಂಗೀತ ಶಾಲೆ “ ನಾಮಫಲಕವಿಲ್ಲದೆ ದಶಕಗಳಿಂದ ಬೆಂಗಳೂರಿನ ಪದ್ಮನಾಭನಗರದ ಅವರ ಸ್ವಗೃಹದಲ್ಲಿ ನಿರಂತರ ನಾದಗಂಗೆಯನ್ನು ಹರಿಸುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ವತ್ತಿಗೆ ಬೇಕಾಗುವ ಎಲ್ಲ ಪಾಠ ಪ್ರವಚನಗಳ ಜೊತೆಯಲ್ಲೇ ಹೊಸ ಆವಿಷ್ಕಾರಗಳ ಮೂಲಕ ಆತ್ಮವಿಶ್ವಾಸ ಮೂಡಿಸುವುದು ಇವರ ವಿಶೇಷತೆ. ಅದರ ಭಾಗವಾಗಿ 2003 ರಿಂದ ಮಾಸಿಕ ಕಚೇರಿಗಳನ್ನು ವಸುಂಧರಾ ಆಯೋಜಿಸಲು ಪ್ರಾರಂಭಿಸಿದರು. ಮೊದಲಿಗೆ ಏಕ ವ್ಯಕ್ತಿಗಾಯನ , ಯುಗಳ ಗಾಯನ , ಗುಂಪು ಗಾಯನ, ಹಾಡಲು ಶಿಷ್ಯಂದಿರಿಗೆ ತಯಾರು ಮಾಡುತ್ತಿದ್ದರು. ನಂತರ ಹೊಸತನಕ್ಕಾಗಿ ವಿಷಯಾಧಾರಿತ ಕಚೇರಿಗಳನ್ನು ನಡೆಸಲು ಆರಂಭಿಸಿದರು. ಅದಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳನ್ನು ಹೊಸ ರಚನೆಗಳನ್ನು ಶಿಷ್ಯರಿಗೆ ಕಲಿಸಿ ತಿದ್ದಿ ಅವರನ್ನು ಮುನ್ನಡೆಸುತ್ತಿದ್ದಾರೆ. ವಿಷಯಾಧಾರಿತ ಕಚೇರಿಗಳಲ್ಲಿ ಅಪರೂಪವೆನಿಸುವ ಕೆಲವೆಂದರೆ: ಒಂದು ವರ್ಷ ‘ಸಂಗೀತದ ಕಲಿಕಾ ಹಂತಗಳು’ ಎಂಬ ವಿಷಯಾಧಾರಿತವಾಗಿ ಮೊದಲ ತಿಂಗಳು ಬಾಲ ಪಾಠ, ನಂತರ ಗೀತೆ, ಸ್ವರಜತಿ, ವರ್ಣ, ಕೃತಿ, ಕಡೆಗೆ ತಿಲ್ಲಾನ ಇತ್ಯಾದಿಯಾಗಿ ಎಲ್ಲಾ ಹಂತಗಳನ್ನು ಪ್ರತಿಯೊಂದು ತಿಂಗಳು ಒಬ್ಬರಿಗೆ ನಿಯೋಜಿಸಿದ್ದರು. ಒಂದೊಂದು ಹಂತದ ಮಹತ್ವವನ್ನು ಒಬ್ಬಬ್ಬರು ಅಧ್ಯಯನ ಮಾಡಿ- ಹಾಡಿ ಇತರರಿಗೆ ತಿಳಿಸಿಕೊಡುವಂತೆ ಮಾಡಿದರು. ಇನ್ನೊಮ್ಮೆ ಆಯ್ದ ವಿಷಯಗಳ ಮೇಲೆ ಕಚೇರಿಗಳಿದ್ದವು. ಅವು ಗಣಪತಿ ಕೃತಿಗಳು , ವಿವಾದಿ ಮೇಳರಾಗಗಳು, ದಶಾವತಾರ ಕೃತಿಗಳು, ರಾಗಮಾಲಿಕ ಕೃತಿಗಳು, ರಾಗಮುದ್ರ, ಮಧ್ಯಮ ಶ್ರುತಿ ಕೃತಿಗಳು, ಇತ್ಯಾದಿ. ಇನ್ನೊಂದು ವರ್ಷ ‘ಏಕ ರಾಗ ‘ ಎಂಬ ವಿಷಯವಾಗಿ ವಿದ್ಯಾರ್ಥಿಗಳು ಆಯ್ದ ರಾಗದಲ್ಲಿ ರಾಗಂ ತಾನಂ ಪಲ್ಲವಿಯೊಂದಿಗೆ ಆಯಾ ರಾಗದ ವಿಶಿಷ್ಟ ವಾದ ರಚನೆಗಳನ್ನು ಹೇಳಿಕೊಟ್ಟು ಹಾಡಿಸಿದ್ದರು. ತಾವು ರಾಗ ಸಂಯೋಜಿಸಿದ ದೇವರನಾಮಗಳನ್ನು ಶಿಷ್ಯರಿಗೆ ಕಲಿಸುವುದಷ್ಟೇ ಅಲ್ಲದೆ, ಈಗ ಶಿಷ್ಯರಿಗೂ ರಾಗ ಸಂಯೋಜಿಸಲು ಪ್ರೋತ್ಸಾಹಿಸುತ್ತಿರುವುದು ಅವರ ದೂರ ದೃಷಿಯ ನಿದರ್ಶನವಾಗಿದೆ. ಬೆಳಕಿಗೆ ಬಾರದ ಹರಿದಾಸರ ಜೀವನ ಚರಿತ್ರೆ ಮತ್ತು ಅವರ ರಚನೆಗಳ ಮೇಲೆ ಅಧ್ಯಯನ ಮಾಡಿ, ರಾಗ ಸಂಯೋಜಿಸಿ ನಿರೂಪಿಸುವ ಸದವಕಾಶವನ್ನೂ ಶಿಷ್ಯರಿಗೆ ನೀಡಿದ್ದಾರೆ. ಪ್ರತಿ ಕಾರ್ಯಕ್ರಮದ ನಂತರ ವಸುಂಧರಾ ವಿದ್ಯಾರ್ಥಿಯ ಕುಂದು ಕೊರತೆಗಳನ್ನು ಗಮನಿಸಿ, ಅದಕ್ಕೆ ಬೇಕಾದ ತಿದ್ದುಪಡಿಗಳನ್ನು ನೀಡಿ , ವಿಮರ್ಶೆ ಮಾಡಿ ಬರೆದಿಡುತ್ತಾರೆ. ಇದು ಸಂಗೀತಗಾರರ ಬೆಳವಣಿಗೆಗೆ ಬಹು ಮುಖ್ಯ ಅಂಶ. ಇತರ ವಿದ್ಯಾರ್ಥಿಗಳಿಗೂ ಕಚೇರಿಯ ವಿಮರ್ಶೆ ಬರೆಯಲು ಪ್ರೋತ್ಸಾಹಿಸುತ್ತಾರೆ.
2005 ರ ನಂತರ ವಾರ್ಷಿಕ ಸ್ಪರ್ಧೆಗಳನ್ನು ಆರಂಭಿಸಿದರು. ಶಾಸ್ತç ಮತ್ತು ಪ್ರಯೋಗಗಳೆರಡರಲ್ಲೂ ವಿದ್ಯಾರ್ಥಿಗಳು ಪರಿಣಿತಿ ಹೊಂದಲು ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ. ನುರಿತ ಸಂಗೀತಜ್ಞರನ್ನು ತೀರ್ಪುಗಾರರಾಗಿ ಕರೆಸುತ್ತಾರೆ. ಅವರು ನೀಡುವ ಸಲಹೆಗಳು ಮತ್ತು ತಿದ್ದುಪಡಿಗಳು ಒಳ್ಳೆಯ ಸಂಗೀತಗಾರರಾಗಲು ಬಹಳ ಉಪಯುಕ್ತವಾಗುತ್ತವೆ. ವರ್ಣ, ಕೃತಿ, ರಾಗಾಲಾಪನೆ, ನೆರವಲ್, ಸ್ವರಕಲ್ಪನೆ, ಪಲ್ಲವಿ, ಮೇಳರಾಗ ಇವುಗಳ ಮೇಲೆಸ್ಪರ್ಧೆಗಳಿರುತ್ತವೆ. ಇವಲ್ಲದೆ ಒಮ್ಮೆ ತಾವೇ ರಾಗ ಸಂಯೋಜಿಸಿದ ಹಲವಾರು ದೇವರ ನಾಮಗಳನ್ನು ಕಲಿಸಿ ಸ್ಪರ್ಧೆಗಿಟ್ಟಿದ್ದರು. ಚೀಟಿ ಎತ್ತಿ ಬಂದ ಪ್ರಶ್ನೆಗೆ ಉತ್ತರಿಸುವುದು ಅಥವಾ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅನಿಸಿಕೆ ನೀಡುವುದು, ಮೂಕಾಭಿನಯ ಮಾಡುವುದು, ರಾಗ ಲಕ್ಷಣ ವಿವರಣೆ, ರಾಗ ಸರಣಿ - ಹೀಗೆ ಪ್ರತಿ ವರ್ಷ ಹೊಸತೇನಾದರೂ ಕಂಡು ಹಿಡಿಯುತ್ತಾ ಬಂದಿದ್ದಾರೆ. ಪ್ರಶ್ನೆಗಳು ನೇರವಾಗಿ ಸುಲಭವಾಗಿರದೆ, ಏನಾದರು ವಿಶೇಷ ಅಂಶಗಳನ್ನು ಅದರೊಂದಿಗೆ ಹೆಣೆದಿಟ್ಟಿರುತ್ತಾರೆ. ಆ ಪ್ರಶ್ನೆಗಳನ್ನು ಉತ್ತರಿಸಲು ವಿದ್ಯಾರ್ಥಿಗಳು ಎಷ್ಟು ಚಿಂತಿಸಬೇಕೋ ಅದರ ಎರಡರಷ್ಟು ಚಿಂತನೆ ಅವುಗಳನ್ನು ರಚಿಸುವುದರಲ್ಲಿ ವಸುಂಧರಾ ಮಾಡಿರುತ್ತಾರೆ. ತಾಳದ ದಶಪ್ರಾಣಗಳು, ಸುಳಾದಿ ಸಪ್ತ ತಾಳಗಳು, ಮೇಳರಾಗ ರಚನಾ ಕ್ರಮ, ವಾಗ್ಗೇಯಕಾರರ ಜೀವನ ಚರಿತ್ರೆ ಮುಂತಾದ ಶಾಸ್ತ್ರದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಲು ಈ ಸ್ಪರ್ಧೆಗಳು ಉಪಯುಕ್ತವಾಗುತ್ತವೆ. ಪ್ರತಿ ವರ್ಷವೂ ಶಿಷ್ಯರ ಸಂಗೀತ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿ, ಅವರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಕೇಳಿ, ಚಿಂತನೆ ಮಾಡಿ, ಇಡೀ ವರ್ಷದ ಕಾರ್ಯಕ್ರಮಗಳನ್ನು ಗೊತ್ತುಪಡಿ ಸುತ್ತಾರೆ. ವಾರಕ್ಕೆರಡು ದಿನದ ತರಗತಿ ಹೊರತು ಪಡಿಸಿ ಶಿಷ್ಯರೆಲ್ಲರೂ ಕೂಡಿ ಇಂತಹ ಕಾರ್ಯಕ್ರಮಗಳನ್ನು ನಡೆಸು ವುದರಿಂದ ಸಾಮರಸ್ಯ, ಮುಂದಾಳತ್ವ ಮುಂತಾದ ವಿಶೇಷ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಪ್ರತಿ ವರ್ಷ ವಿಜಯದಶಮಿಯಂದು ಒಂದು ಕೃತಿ, ತಾವೇ ರಾಗ ಸಂಯೋಜಿಸಿದ ಒಂದೆರಡು ದೇವರನಾಮಗಳನ್ನು ಕಲಿಸಿಕೊಡುತ್ತಾರೆ. ಇದಲ್ಲದೆ ತ್ಯಾಗರಾಜರ ಆರಾಧನೆಯೊಂದಿಗೆ ವಾರ್ಷಿಕ ಸ್ಪರ್ಧೆಗಳಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡುತ್ತಾರೆ. ಬಹುಮಾನ ಮುಖ್ಯವಲ್ಲ; ನಾವು ಪಡುವ ಶ್ರಮ ಮತ್ತು ಸ್ಪರ್ಧೆಗಳಿಂದ ಆಗುವ ಅನುಭವ ಮುಖ್ಯವೆಂದು ಯಾವಾಗಲು ಹೇಳುತ್ತಾರೆ.
ಹೊಸ ವಿಚಾರಗಳ ಬಗ್ಗೆ ತಿಳಿಯಲು ಹಾಗು ಹೊಸ ರಚನೆಗಳನ್ನು ಕಲಿಯಲು ಇಂತಹ ಕಾರ್ಯಕ್ರಮಗಳು ಬಹು ಮುಖ್ಯ. ಪರೀಕ್ಷೆಗಳ ಗೋಜಿನಲ್ಲಿ ಕಣ್ಣು ಕಟ್ಟಿದ ಕುದುರೆಯಂತೆ ಹೋಗದೆ, ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಸಾರ್ವತ್ರಿಕ ಪೋಷಣೆ ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಯನ್ನು ಧ್ಯೇಯವಾಗಿ ಇಟ್ಟು ಕೊಂಡು, ಎಷ್ಟೇ ಅಡಚಣೆಗಳು ಬಂದರು ನಡೆಸಿಕೊಂಡು ಬರುತಿದ್ದಾರೆ. ಸಂಗೀತದಿAದ ನೆಮ್ಮದಿ, ಶಾಂತಿ ಸಿಗುವುದು ಮುಖ್ಯ ಎನ್ನುವ ವಸುಂಧರಾ ಸಂಗೀತ, ಸಾಹಿತ್ಯ ಮತ್ತು ಸಂಸ್ಕöÈತಗಳಲ್ಲಿ ಪರಿಣತಿ ಹೊಂದಿದ್ದಾರೆ. ವಿದುಷಿ ಶ್ರೀಮತಿ ಟಿ ಎಸ್ ವಸುಂಧರಾ ಅವರು “ಲಲಿತ ಕಲಾಕುಸುಮ”, “ಅಭಿನವ ಶಾರದೆ “, “ಗಾನಕಲಾ ಸುವರ್ಣ” ಮುಂತಾದ ಬಿರುದು-ಗೌರವಗಳಿಗೆ ಪಾತ್ರರಾಗಿದ್ದಾರೆ. ನೂರಾರು ಶಿಷ್ಯರಿಗೆ ದಾರಿ ದೀಪವಾಗಿರುವ ವಸುಂಧರಾ ಮೇಡಂಗೆ ಇತ್ತೀಚಿಗೆ ಗಾಯನ ಸಮಾಜ 55ನೇ ಸಮ್ಮೇಳನದಲ್ಲಿ “ಕಲಾ ಜ್ಯೋತಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.
******
ಚಿತ್ರ\ಬರಹ: ಮೃದುಲಾ ಟಿ.ಎಂ.