ಬೆಳಗಾವಿ: ಗಣೇಶ ವಿಸರ್ಜನೆಗೆ ತೆರಳಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ನಿವಾಸಿ ವಿಶ್ವೇಶ್ ನಾಯಕ್ (20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದೆ.ವಿಶ್ವೇಶ್ ತಮ್ಮ ಸ್ನೇಹಿತರೊಂದಿಗೆ ಗಣಪತಿ ವಿಸರ್ಜನೆ ಮಾಡಲು ಗ್ರಾಮದ ಕೆರೆಗೆ ತೆರಳಿದ್ದನು. ಗಣೇಶ ಮೂರ್ತಿಯನ್ನು ನೀರಿಗಿಳಿಸಿ ವಾಪಸ್ ದಡಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಸ್ನೇಹಿತರ ಕಣ್ಣೆದುರಲ್ಲೇ ಯುವಕ ನೀರಿನಲ್ಲಿ ಮುಳುಗಿದ್ದು, ಆತ ಕೆರೆಯಲ್ಲಿ ಮುಳುಗುತ್ತಿರುವ ದೃಶ್ಯ ಅಲ್ಲಿಯೇ ಇದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಕೆರೆಯಲ್ಲಿ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಬೆಳೆಯುವ ವಯಸ್ಸಿನ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.