ಐಚಿ-ನಗೋಯಾ: ಏಷ್ಯನ್ ಗೇಮ್ಸ್ 20ನೇ ಆವೃತ್ತಿಯಲ್ಲಿ ಭಾರತ ಸೋಮವಾರ ಒಂದೇ ದಿನ 4 ಬೆಳ್ಳಿ, 4 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು. ಈ ಪೈಕಿ ಅಥ್ಲೆಟಿಕ್ಸ್ ಒಂದರಲ್ಲೇ 6 ಪದಕಗಳು (3 ಬೆಳ್ಳಿ, 3 ಕಂಚು) ಒಲಿದವು. ಇದರಿಂದ ಭಾರತ ಈಗ 4 ಚಿನ್ನ, 20 ಬೆಳ್ಳಿ, 21 ಕಂಚಿನ ಸಹಿತ ಒಟ್ಟು 45 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 12ನೇ ಸ್ಥಾನ ಕಾಯ್ದುಕೊಂಡಿದೆ. ಜತೆಗೆ ಬಾಕ್ಸಿಂಗ್‌ನಲ್ಲಿ ಒಟ್ಟು 6 ಪದಕ ಖಚಿತಗೊಂಡಿವೆ.ಒಲಿಂಪಿಕ್ಸ್ ಅವಳಿ ಪದಕ ವಿಜೇತ ನೀರಜ್ ಚೋಪ್ರಾ ಗೈರಿನ ನಡುವೆಯೂ ಭಾರತ ತಂಡ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅವಳಿ ಪೋಡಿಯಂ ಫಿನಿಶ್ ಕಂಡಿದೆ. ನಿರೀಕ್ಷೆಯಂತೆಯೇ ಶ್ರೀಲಂಕಾದ ಹೊಸ ತಾರೆ ರುಮೇಶ್ ಪಥಿರಗೆ 88.33 ಮೀ. ಎಸೆತದೊಂದಿಗೆ ಚಿನ್ನದ ಪದಕ ಬಾಚಿಕೊಂಡರೆ, ಹರಿಯಾಣದ 24 ವರ್ಷದ ಯಶ್‌ವೀರ್ ಸಿಂಗ್ ಜೀವನಶ್ರೇಷ್ಠ 85.72 ಮೀ. ಎಸೆತದೊಂದಿಗೆ ಬೆಳ್ಳಿ ಜಯಿಸಿದರು. ಉತ್ತರ ಪ್ರದೇಶದ 25 ವರ್ಷದ ರೋಹಿತ್ ಯಾದವ್ 84.35 ಮೀ. ಎಸೆತದೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಬೆಳ್ಳಿ ಪದಕಕ್ಕೆ ಭಾರತೀಯರ ನಡುವೆಯೇ ಪೈಪೋಟಿ ಏರ್ಪಟ್ಟಿತು. ಮೊದಲ 3 ಎಸೆತಗಳ ಬಳಿಕ ರೋಹಿತ್ ಮುಂದಿದ್ದರೆ, 4ನೇ ಎಸೆತದ ನಂತರ ಯಶ್‌ವೀರ್ ಮೇಲುಗೈ ಸಾಧಿಸಿದರು. ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ (80.29 ಮೀ.) 4ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.