ಬೀದರ್: ಚಿಕ್ಕಬಳ್ಳಾಪುರದಲ್ಲಿ ಶಾಸಕರ ಬೆಂಬಲಿಗರು ಉದ್ರೇಕಗೊಂಡು ತಾಲೂಕುಗಳನ್ನು ಬಂದ್ ಮಾಡಿ ಸರ್ಕಾರದ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿರುವುದು ತಪ್ಪು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.ಬೀದರ್‌ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ. ಸಚಿವ ಸ್ಥಾನ ಸಿಗದವರಿಗೆ ನಿಗಮ-ಮಂಡಳಿ ಸೇರಿದಂತೆ ಸೂಕ್ತ ಸ್ಥಾನಮಾನಗಳನ್ನು ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆಯಲಿದೆ ಎಂದರು.ಚಿಕ್ಕಬಳ್ಳಾಪುರದ ಹಲವು ತಾಲೂಕುಗಳಲ್ಲಿ ಬಂದ್ ನಡೆಸಲಾಗಿದೆ. ಬೇರೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಅದರಿಂದ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ ಅಥವಾ ಎಲ್ಲ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದು ಅರ್ಥವಲ್ಲ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೊನೆಗೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.ಸಚಿವ ಸಂಪುಟದಲ್ಲಿ ಕೇವಲ 34 ಸ್ಥಾನಗಳಿವೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ, ಬಹುತೇಕ ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.