`
ನಮ್ ಋಷಿ ಅವರ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯೊಂದಿಗೆ ಅವರೇ ನಿರ್ಮಿಸಿ ನಿರ್ದೇಶಿಸಿರುವ `ರಾಮ್ ರಹೀಮ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕೆ. ಮಂಜು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕೆ.ಮಂಜು ಮಾತನಾಡಿ ಆತ್ಮೀಯ ಸ್ನೇಹಿತ ನಮ್ ಋಷಿ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಚಿತ್ರದ ಕೆಲಸ, ಕಲಾವಿದರ ಅಭಿನಯ ಹಾಗೂ ಲೊಕೇಷನ್‌ಗಳು ಆಕರ್ಷಕವಾಗಿವೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಋಷಿಗೆ ಭಗವಂತ ಒಳ್ಳೆಯ ಯಶಸ್ಸು ನೀಡಲಿ. ಮುಂದಿನ ಚಿತ್ರ ಮಾಡುವ ಶಕ್ತಿಯೂ ದೊರೆಯಲಿ. ಅವರ ಬೆನ್ನೆಲುಬಾಗಿ ನಾವೆಲ್ಲರೂ ಇರುತ್ತೇವೆ ಎಂದರು.ಚಿತ್ರದ ಕುರಿತು ಮಾತನಾಡಿದ ನಮ್ ಋಷಿ, ಚಿತ್ರಕ್ಕೆ ಬೆಂಬಲವಾಗಿ ನಿಂತಿರುವ ಹಿರಿಯರು, ಸಾಹಿತಿಗಳು, ಪತ್ರಿಕಾ ಮಾಧ್ಯಮ ದವರು, ನಿರ್ಮಾಪಕರು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಸಿನಿಮಾ ನಿರ್ಮಾಣದ ಹಾದಿಯಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಅಡೆತಡೆಗಳನ್ನು ಎದುರಿಸಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು. ಚಿತ್ರದಲ್ಲಿ ನಟಿಸಿರುವ ಕ್ಯಾದಿಗಾರ ಅರುಣ್ ಹಾಗೂ ಕಿರಣ್ ಅದ್ವಿತ್ ಮಾತನಾಡಿ ಇಂದು ಟ್ರೇಲರ್ ಬಿಡುಗಡೆ ಹಂತಕ್ಕೆ ತಲುಪಿರುವುದು ಸಂತೋಷ ತಂದಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಮೆಚ್ಚಿ ಗೆಲ್ಲಿಸಬೇಕು ಎಂಬುದೇ ನಮ್ಮ ಆಶಯ ಎಂದರು.