ಕೆಜಿಎಫ್ : ತಾಲೂಕಿನಲ್ಲಿ ಕಳೆದ ಮೇ ತಿಂಗಳಲ್ಲಿ ಸುರಿದ ಆಕಾಲಿಕ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಮಾವು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ತಕ್ಷಣ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ಒಂದು ವಾರದೊಳಗೆ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಭಿಲಾಷ್ ರೆಡ್ಡಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್ ಗಾಯತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಸುರಿದ ಆಕಾಲಿಕ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಮಾವು, ಬಾಳೆ, ಪಪ್ಪಾಯಿ ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಇದರಿಂದ ರೈತರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಿದ್ದು, ಕೃಷಿಗಾಗಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ಸಂಕಷ್ಟಕ್ಕೆ
ಸಿಲುಕಿದ್ದಾರೆ ಎಂದು ತಿಳಿಸಿದರು.ಮೂರು ತಿಂಗಳು ಕಳೆದರೂ ರೈತರ ಖಾತೆಗೆ ಪರಿಹಾರ ಹಣವಿಲ್ಲ!: ಬೆಳೆ ನಷ್ಟ ಸಂಭವಿಸಿದ ಸಂದರ್ಭದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಒಂದು ತಿಂಗಳೊಳಗೆ ಪರಿಹಾರ ವಿತರಿಸುವ ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಒಬ್ಬ ರೈತನ ಖಾತೆಗೂ ಒಂದು ರೂಪಾಯಿ ಪರಿಹಾರ ಹಣ ಜಮೆಯಾಗಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು 647 ರೈತರಿಗೆ ಮಂಜೂರಾಗಿರುವ ಒಟ್ಟು 60 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಒಂದು ವಾರದೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ದಿನಗಳು ಕಳೆದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ನೀಡುವ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಬಾರದು. ಮಂಜೂರಾಗಿರುವ ಪರಿಹಾರ ಹಣವನ್ನು ಕೂಡಲೇ ರೈತರ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ಬರ ಪರಿಹಾರ ನಿಧಿಯೂ ಬಿಡುಗಡೆಯಾಗಿಲ್ಲ ಸರ್ಕಾರ ಕೆಜಿಎಫ್ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದರೂ, ರೈತರಿಗೆ ಬರ ಪರಿಹಾರ ನಿಧಿ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ. ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರದ ನೆರವು ಅತ್ಯಂತ ಅಗತ್ಯವಾಗಿದೆ. ಬೆಳೆ ನಷ್ಟ, ಬರ ಪರಿಸ್ಥಿತಿ ಹಾಗೂ ಕೃಷಿ ವೆಚ್ಚದ ಹೆಚ್ಚಳದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಬರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ವಿತರಣೆಯಲ್ಲಿ ತಾರತಮ್ಯ ಆರೋಪ: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದಾಗಿ ಮಾವಿನ ಬೆಳೆಗೆ ಸುಮಾರು ಶೇ.60ರಷ್ಟು ನಷ್ಟ ಸಂಭವಿಸಿದೆ. ಆದರೆ ವಿಮಾ ಕಂಪನಿಯು ಕೇವಲ ಶೇ.15ರಷ್ಟು ಮಾತ್ರ ವಿಮಾ ಪರಿಹಾರವನ್ನು ಬಿಡುಗಡೆ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅಭಿಲಾಷ್ ರೆಡ್ಡಿ ಆರೋಪಿಸಿದರು.
ರೈತರ ನೈಜ ಬೆಳೆ ನಷ್ಟದ ಪ್ರಮಾಣವನ್ನು ಪರಿಗಣಿಸದೆ ಕಡಿಮೆ ಪ್ರಮಾಣದ ವಿಮಾ ಪರಿಹಾರ ನೀಡಿರುವುದರಿಂದ ಮಾವು ಬೆಳೆಗಾರರಿಗೆ ತೀವ್ರ ಅನ್ಯಾಯವಾಗಿದೆ. ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಹಾಗೂ ವಿಮಾ ಕಂಪನಿಯವರು ಮತ್ತೊಮ್ಮೆ ಪರಿಶೀಲನೆ ನಡೆಸಿ, ರೈತರಿಗೆ ಸಂಭವಿಸಿರುವ ಶೇ.60ರಷ್ಟು ನಷ್ಟಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 20 ಸಾವಿರ ರೂಪಾಯಿಗಳಂತೆ ಪೂರ್ಣ ಪ್ರಮಾಣದ ವಿಮಾ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಗಿ, ನೆಲಗಡಲೆ ಬೆಳೆಗಾರರಿಗೂ ವಿಮೆ ನೀಡಿ
ಮಾವು ಬೆಳೆಗಾರರ ಸಮಸ್ಯೆಯ ಜೊತೆಗೆ ರಾಗಿ, ನೆಲಗಡಲೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದಿರುವ ರೈತರಿಗೂ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿರುವ ಪ್ರತಿಯೊಬ್ಬ ರೈತನಿಗೂ ನ್ಯಾಯಯುತ ಪರಿಹಾರ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರೈತರನ್ನು ಸಂಘಟಿಸಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ದೊರೈಸ್ವಾಮಿ ಬಲರಾಮ್, ಕೃಷ್ಣಾರೆಡ್ಡಿ , ಶಂಕರ್, ಜಯರಾಮ್, ರಘುರಾಮ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.