ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ `ಸತ್ಯ ಇನ್ ಸೌಜನ್ಯ’ ಚಿತ್ರದ ಪೋಸ್ಟರ್‌ನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ತಿರುಳನ್ನು ಆಲಿಸಿದ ಸಿದ್ದು “ಚೆನ್ನಾಗಿದೆ.”.. ಬಿಡುಗಡೆಯಾದಾಗ ನನಗೂ ತಿಳಿಸಿ, ನೋಡುವೆನು ಎಂದು ಚಿತ್ರತಂಡದ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿರುವುದು ಟೀಂಗೆ ಶಕ್ತಿ ಬಂದಂತೆ ಆಗಿದೆ. ಯಾದಗಿರಿ ಮೂಲದ ಭಾನುಪ್ರಕಾಶ್ ಅವರು ಮಹದೇವ್ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ, ಕಥೆ ಮತ್ತು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ತೆರೆಕಂಡ `ಸೈದಾಪುರ’ ಹಾಗೂ ಬಿಡುಗಡೆಯಾಗಬೇಕಾದ `ಅಂತಿಮಯಾತ್ರೆ’ ಚಿತ್ರಗಳು ಇದೇ ಸಂಸ್ಥೆಯಿಂದ ನಿರ್ಮಾಣಗೊಂಡಿದ್ದವು.ಪ್ರಸಕ್ತ ಸಮಾಜದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆ ಕಮರ್ಷಿಯಲ್ ಟಚ್ ನೀಡಿ ಚಿತ್ರಕಥೆ ಬರೆಯಲಾಗಿದೆ. ಸಮಾಜದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸುವುದು ಹಾಗೂ ಇಂತಹ ಘಟನೆಗಳಿಂದ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಚಿತ್ರದ ಪ್ರಮುಖ ಉದ್ದೇಶವಾಗಿದೆ.ಶ್ರದ್ದಮಂಜುನಾಥ್ ನಾಯಕಿ. ಮಿಕ್ಕಂತೆ ಕಲಾವಿದರು, ಸಂಗೀತ ಇತರೆ ವಿವರಗಳು ಮುಂದಿನ ದಿನಗಳಲ್ಲಿ ನೀಡುವುದಾಗಿ ನೀಡಲಾಗುವುದು. ಎಲ್ಲವು ಯೋಜನೆಯಂತೆ ನಡೆದರೆ, ಮುಂದಿನವಾರದಿಂದಲೇ ಯಾದಗಿರಿ, ರಾಯಚೂರು ನಂತರ ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸುವುದಾಗಿ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕ ಭಾನುಪ್ರಕಾಶ್ ತಿಳಿಸಿದ್ದಾರೆ.