ಕಡಲ ತಡಿಯ ಮಜವಾದ ಕಥೆಯನ್ನೊಳ ಗೊಂಡ ಈ ಚಿತ್ರ, ಗಲಾಟೆ ಸಾಂಗ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಆ ಪಾರ್ಟಿ ಹಾಡು ಹಬೆಯಾಡುತ್ತಿರುವಾಗಲೇ, ಚಿತ್ರತಂಡ `ಅಂದಗಾತಿಯೇ’ ಎಂಬ ಲಿರಿಕಲ್ ಸಾಂಗನ್ನು ಬಿಡುಗಡೆಗೊಳಿಸಿದೆ. ಪ್ರೀತಿಯ ನವಿರು ಭಾವಗಳಿಂದ ಮೈದುಂಬಿಕೊಂಡ ಈ ಹಾಡಿನ ಮೂಲಕ ಮ್ಯಾರೇಜ್ ಪಾರ್ಟಿಯ ಮತ್ತೊಂದು ಮಜಲು ಅನಾವರಣಗೊಂಡಿದೆ.ಮೊದಲಾ ಮಳೆಹನಿ ಎದೆಯೊಳಗಡೆ ಇಳಿದು... ಅಂತ ಶುರುವಾಗೋ ಅಂದಗಾತಿಯೇ ಲಿರಿಕಲ್ ಹಾಡು ರೊತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಕಪಿಲ್ ಕಪಿಲನ್ ಮತ್ತು ಸುಮನ್ ನಾರಾಯಣ್ ಧ್ವನಿಯಲ್ಲಿ ಮೂಡಿ ಬಂದಿರೋ ಸದರಿ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ನಿರ್ದೇಶಕರು ಮ್ಯಾರೇಜ್ ಪಾರ್ಟಿಯ ಕಥಾ ಹಂದರದಲ್ಲಿ ಎಂತೆAಥಾ ಅಂಶಗಳಿದ್ದಾವೆಂಬ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊAಡಿದ್ದರು. ವಾರಗಳ ಹಿಂದೆ ಬಿಡುಗಡೆಗೊಂಡಿದ್ದ ಗಲಾಟೆ ಸಾಂಗ್ ಅದರಲ್ಲೊಂದು ಭಾವವನ್ನು ಹಿಡಿದಿಟ್ಟುಕೊಂಡಿದ್ದು. ಅಂದಗಾತಿಯೇ ಹಾಡಿನ ಮೂಲಕ ಪ್ರೇಮಕಥನದ ಛಾಯೆ ಜಾಹೀರಾಗಿದೆ.
ಮ್ಯಾರೇಜ್ ಪಾರ್ಟಿ ಚಿತ್ರ ಡಿಸೆಂಬರ್ 4ರಂದು ತೆರೆಗಾಣಲಿದೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.