ಮುಳಬಾಗಿಲಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದೊಂದಿಗೆ ನಟ ಗಣೇಶ್ ಅಭಿನಯದ `ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನೆರವೇರಿತು.
ಸ್ಥಳೀಯ ಶಾಸಕ ಹಾಗೂ ಚಿತ್ರದ ನಿರ್ಮಾಪಕ ಸಮೃದ್ಧಿ ವಿ ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭಕ್ಕೆ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮುಳಬಾಗಿಲಿನ ಆಂಜನೇಯ ಸ್ವಾಮಿ ದೇವಸ್ಥಾನ ತಮ್ಮ ತಂದೆ ರಾಜ್‌ಕುಮಾರ್ ಅವರಿಗೆ ಪ್ರಿಯವಾದ ಸ್ಥಳವಾಗಿತ್ತು ಎಂದು ನೆನಪಿಸಿಕೊಂಡರು. `ಬೃಂದಾವಿಹಾರಿ’ ಚಿತ್ರಕ್ಕೆ ಕನ್ನಡಿಗರು ಹಾಗೂ ಸಿನಿ ಪ್ರೇಮಿಗಳು ಪ್ರೀತಿ, ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ನಟ ಗಣೇಶ್ ಮಾತನಾಡಿ, ಮುಳಬಾಗಿಲಿನಲ್ಲಿ ಚಿತ್ರದ ಕ್ಲೈ ಮ್ಯಾಕ್ಸ್ ದೃಶ್ಯಗಳನ್ನು ಹತ್ತು ದಿನಗಳ ಕಾಲ ಚಿತ್ರೀಕರಿಸಿರುವುದನ್ನು ಸ್ಮರಿಸಿದರು. ಮುಳಬಾಗಿಲಿನಲ್ಲಿಯೇ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ ಎಂದರು.ನಿರ್ದೇಶಕ ಶ್ರೀನಿವಾಸ ರಾಜು ಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದು, ರಂಗಾಯಣ ರಘು, ಮಾಳವಿಕಾ ಶರ್ಮಾ, ದೇವಿಕಾ ಭಟ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. `ಬೃಂದಾವಿಹಾರಿ’ ಉತ್ತಮ ಕೌಟುಂಬಿಕ ಮನರಂಜನಾ ಚಿತ್ರವಾಗಿ ಮೂಡಿಬಂದಿದೆ ಎಂದರು.ನಿರ್ಮಾಪಕ ಹಾಗೂ ಶಾಸಕ ಸಮೃದ್ಧಿ ವಿ ಮಂಜುನಾಥ್ ಮಾತನಾಡಿ, `ಬೃಂದಾವಿಹಾರಿ’ ತಮ್ಮ ನಿರ್ಮಾಣದ ನಾಲ್ಕನೇ ಚಿತ್ರವಾಗಿದ್ದು, ಗಣೇಶ್ ಅಭಿನಯ ಹಾಗೂ ಇಡೀ ಚಿತ್ರತಂಡದ ಸಹಕಾರದೊಂದಿಗೆ ಚಿತ್ರವನ್ನು ನಿರ್ಮಿಸಿರುವುದಾಗಿ ತಿಳಿಸಿದರು.ಚಿತ್ರದ ನಿರ್ದೇಶಕರ ಶ್ರೀನಿವಾಸರಾಜು ನಾಯಕಿಯರಾದ ಮಾಳವಿಕಾ ಶರ್ಮಾ ಹಾಗೂ ದೇವಿಕಾ ಭಟ್, ಹಿರಿಯ ನಟ ರಂಗಾಯಣ ರಘು, ಕುರಿ ಪ್ರತಾಪ್, ಪಾವಗಡ ಮಂಜು, ಜಗ್ಗಪ್ಪ ಸೇರಿದಂತೆ ಹಲವು ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದರು.