ಬೆಂಗಳೂರು: `ಬಸವ ಮಂಟಪ' ಕೃತಿಯಲ್ಲಿ ಜಗಜ್ಯೋತಿ ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಕೃತಿಯನ್ನು ಮುಟ್ಟುಗೋಲು ಹಾಕಲು ಕರ್ನಾಟಕ ಸಚಿವ ಸಂಪುಟ ಗುರುವಾರ ಸಮ್ಮತಿಸಿದೆ. ಇದೇ ವೇಳೆ, ಲೇಖಕ ರವಿ ಹಂಜ್, ಕೃತಿ ಪ್ರಕಟಿಸಿದ ಪ್ರಕಾಶನದ ಮಾಲೀಕ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಲೇಖಕ ರವಿ ಹಂಜ್ ಕ್ಷಮೆಯಾಚಿಸಿದ್ದಾರೆ. ಟಿವಿ ಸಂದರ್ಶನದಲ್ಲಿ ತಾವು ಮಾತನಾಡಿದ್ದನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ ಎಂದು ರವಿ ಹಂಜ್ ಸ್ಪಷ್ಟಪಡಿಸಿದ್ದಾರೆ.ತಮ್ಮ ಮಾತುಗಳಿಂದ ವೀರಶೈವ ಲಿಂಗಾಯತ ಬಂಧುಗಳಿಗೆ ನೋವುಂಟಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಮತ್ತು ಕ್ಷಮೆಯಾಚಿಸುವುದಾಗಿ ಅವರು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಒತ್ತಾಯಕ್ಕೆ ಸ್ಪಂದಿಸಿದ ರವಿ ಹಂಜ್, ಬಸವ ಮಂಟಪ ಕೃತಿಯನ್ನು ಪ್ರತಿ ಜಿಲ್ಲೆಯಲ್ಲಿ ಮರು ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಸದ್ಯದಲ್ಲೇ ಮರು ಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸಾರ್ವಜನಿಕರ ಸಹಕಾರವನ್ನು ನಿರೀಕ್ಷಿಸಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ.