LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ . ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.

ಅಲ್ಲಮ ಪ್ರಭುಗಳ ವಚನಗಳು ೩೨
ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ .
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
ದಿಟದಿಂತ ತನ್ನ ತಾ ಕಾಣಬೇಕು.
ದಿಟದಿಂದ ತನ್ನ ತಾ ಕೇಳಬೇಕು.
ದಿಟದಿಂದ ತನ್ನ ತಾ ಮಾತಾಡಬೇಕು.
ಇದೇ ತನ್ನ ನೆಲೆ ಸ್ವಭೂಮಿ ಸ್ವಸ್ವರೂಪ ಕಾಣಾ ಗುಹೇಶ್ವರಾ.

ಭಾವಾರ್ಥ
ಮಾನವನ ಇಂದ್ರಿಯಗಳು ಹೊರಮುಖವಾಗಿಯೇ ತೆರೆದುಕೊಳ್ಳುವುದರಿಂದ, ಆ ಇಂದ್ರಿಯಗಳಿAದ ಪಡೆದ ಮಾಹಿತಿಗಳಿಂದಾಗಿ ಮನಸ್ಸು ಯಾವಾಗಲೂ ಹೊರ ಜಗತ್ತಿನ ಬಗ್ಗೆಯೇ ಹೆಚ್ಚು ಚಿಂತಿಸುತ್ತದೆ. ಹೊರಗಿನ ವಿಚಾರಗಳನ್ನು ಸರಿಯಾಗಿ ಗ್ರಹಿಸಿದಾಗ ಮಾತ್ರ ಸ್ವ ರಕ್ಷಣೆ ಸಾಧ್ಯವಾಗುತ್ತಿದ್ದ ಕಾರಣ, ಮಾನವ ವಿಕಾಸ ಪಥದಲ್ಲಿ ಬಾಹ್ಯದೊಂದಿಗೆ ಸಂಪರ್ಕವನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುತ್ತಾ ಸಾಗಿದ. ಹಾಗಾಗಿಯೇ ಬಾಹ್ಯಕ್ಕೆ ತೆರೆದುಕೊಳ್ಳುವ ಇಂದ್ರಿಯಗಳು ಹೆಚ್ಚು ಹೆಚ್ಚು ಗ್ರಹಣ ಶೀಲವಾಗುತ್ತಾ ಸಾಗಿದವು. ಮುಂದೆ ಇದೇ ಅಭ್ಯಾಸವಾಗಿ, ಅಂತರ್ಮುಖಿಯಾಗುವುದನ್ನೇ ಮರೆತು ಕೇವಲ ಬಹಿರ್ಮುಖಿಯಾಗಿ ಉಳಿದ. ಹೊರಗಿನ ಅಪಾಯಗಳನ್ನು ಎದುರಿಸಲು ಸರ್ವಸಿದ್ಧನಾದ ಮೇಲೆ, ಸ್ವರಕ್ಷಣೆಗೆ ಸಮರ್ಥನಾದ ಮೇಲೆ ಒಳಗನ್ನು ಅರಿಯುವುದು ಒಂದು ಅನ್ವೇಷಣೆಯಂತಾಯಿತು. ಹೊರಗನ್ನು ಎಷ್ಟು ತಿಳಿದರೂ ಒಳಗನ್ನರಿಯದೆ ಹೋದರೆ ಅದು ನಿಜವಾದ ಜ್ಞಾನವೆನಿಸಿಕೊಳ್ಳಲಾರದು. `ತನ್ನಂತೆ ತಾನಾಗದವ ಜಗದೊಳು ಏನಾದಡೇನು ಸರ್ವಜ್ಞ’ ಎನ್ನುವ ಸರ್ವಜ್ಞನ ಮಾತಿನಂತೆಯೇ, ತನ್ನ ಸ್ವರೂಪವನ್ನು ತಿಳಿದು, ತನ್ನ ಮೂಲ ಸ್ವಭಾವಕ್ಕನುಗುಣವಾಗಿ ನಡೆಯದೆ ಹೋದರೆ, ಪ್ರಾಪಂಚಿಕ ಮುಖವಾಗಿ ನಡೆದ ಎಲ್ಲವೂ ವ್ಯರ್ಥ ಎಂದು ಅಲ್ಲಮರು ಹೇಳುತ್ತಾರೆ.
ವಾಕ್ಯಾರ್ಥ
ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ
ಬಾಹ್ಯದ ಕಣ್ಣುಗಳಿಂದ ನಾವು ಏನೆಲ್ಲಾ ನೋಡಿದರೂ ನಮ್ಮನ್ನು ನಾವು ನೋಡಿಕೊಳ್ಳಲಾರೆವು. ಬಾಹ್ಯದ ಕಣ್ಣುಗಳಿಗೆ `ನಾನು’ ಕಾಣಲು ಸಾಧ್ಯವಿಲ್ಲ. ಕನ್ನಡಿಯಲ್ಲಿ ನೋಡುವುದಾದರೆ ಅದು ಬಾಹ್ಯದಲ್ಲಿ ಕಾಣುವ ಭೌತಿಕ ಆಕಾರದ ಪ್ರತಿಬಿಂಬವೇ ಹೊರತು `ನಾನು’ ಆಗಲಾರದು. ಹಾಗಾದರೆ ನನ್ನನ್ನು ನೋಡಿಕೊಳ್ಳುವ ಬಗೆ ಹೇಗೆ? ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರತಿದಿನ ಒಂದಿಷ್ಟು ಸಮಯ ತನಗಾಗಿಯೇ ಮೀಸಲಿಟ್ಟು, ಹೊರಗಿನ ಸಂಪರ್ಕದಿಂದ ವಿಮುಖವಾಗಿ, ತನ್ನ ಆಂತರ್ಯದೊಳಗೆ ಅಂತಃಚಕ್ಷುವಿನ ಮೂಲಕ ನೋಡಲು ಸಾಧ್ಯವಾದರೆ, ತನ್ನನ್ನು ತಾನೇ ಕಾಣಲು ಸಾಧ್ಯ. ಇದು ಕೇವಲ ಅನುಭವಕ್ಕೆ ಧಕ್ಕುವ `ಕಾಣುವಿಕೆ’. ಹೀಗೆ ತನ್ನನ್ನು ತಾನೇ ಕಂಡುಕೊಳ್ಳಲು ಸಾಧ್ಯವಾದರೆ, `ನಾನು ಈ ದೇಹ’, `ಈ ಮನಸ್ಸು ನಾನು’ ಎಂಬೆಲ್ಲಾ ಕುರುಡುತನ ಕಳೆಯಲು ಸಾಧ್ಯ. ಇಲ್ಲವಾದರೆ ಅದು ಕುರುಡುತನವೇ ಆಗುತ್ತದೆ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ
ಲೋಕ ವ್ಯವಹಾರದ ಸಾವಿರಾರು ವಿಷಯಗಳನ್ನು ಕೇಳಿ ಸಂಗ್ರಹಿಸಿದರೂ ಆ ಸಂಗ್ರಹವೇ ಅಂತಿಮ ಸತ್ಯವಾಗಲಾರದು. ಒಂದು ವಿಷಯದ ಬಗ್ಗೆ ಒಬ್ಬರ ಅಭಿಪ್ರಾಯ ಒಂದು ರೀತಿಯದ್ದಾದರೆ, ಅದೇ ವಿಷಯದ ಬಗೆಗಿನ ಇನ್ನೊಬ್ಬರ ಅಭಿಮತವೇ ಬೇರೆ ಇರುತ್ತದೆ. ಎರಡನ್ನೂ ಕೇಳಿದಾಗ ಮನಸ್ಸು ಆ ವಿಚಾರಗಳನ್ನು ತಕ್ಕಡಿಯಲ್ಲಿಟ್ಟು ತೂಗಲಾರಂಭಿಸುತ್ತದೆ. ಅನೇಕ ಬಾರಿ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲಾರದೆ ಮನ ಗೊಂದಲದ ಗೂಡಾಗುತ್ತದೆ. ಮತ್ತೆ ಇನ್ಯಾವುದೋ ವಿಷಯವನ್ನು ಕೇಳಿ ಮನಸ್ಸು ಅದರ ಹಿಂದೆ ಹೋಗಿ, ಯೋಚಿಸಲಾರಂಭಿಸುತ್ತದೆ. ಹೀಗೆ ಕೇಳುವಿಕೆಯಿಂದ ನಡೆಯುವ ಮಾಹಿತಿ ಸಂಗ್ರಹ, ಚಿಂತನೆಗಳು, ತರ್ಕಗಳು ಅಪೂರ್ಣವಾಗಿಯೇ ಉಳಿಯುತ್ತವೆ. ಕೆಲವೊಮ್ಮೆ ಪೂರ್ಣ ಅರ್ಥೆಸಿಕೊಂಡು, ಖಚಿತ ನಿರ್ಧಾರಕ್ಕೆ ಬಂದಿದ್ದೇವೆ ಎಂದುಕೊಂಡರೂ, ಸಮಯ - ಸಂದರ್ಭಗಳು ಬದಲಾದಂತೆ ನಿರ್ಧಾರವೇ ತಪ್ಪೆನಿಸಿಬಿಡಬಹುದು. ಹೀಗೂ ಸಹ ಹೊರಗಿನಿಂದ ಕೇಳಿ ಪಡೆದ ತಿಳುವಳಿಕೆ, ಶಾಶ್ವತವಾಗಿ ಒಂದೇ ನೆಲೆಯಲ್ಲಿ ಗುರುತಿಸಿಕೊಳ್ಳಲಾರದೆ, ಪರಿಪೂರ್ಣತೆ ಪಡೆಯದೆ, ಅಪೂರ್ಣವಾಗಿ ಉಳಿಯುತ್ತದೆ.
ಸ್ವಯಂಪ್ರಜ್ಞೆಯೇ ಅಂತರಂಗದ ಕಿವಿ. ಸೂಕ್ಷ÷್ಮವಾಗಿ ಆಲಿಸಿದಾಗ ಒಳ ಮನಸ್ಸಿನ ಮಾತುಗಳು ನಮ್ಮನ್ನು ಸರಿಯಾಗಿ ನಿರ್ದೇಶಸುವುದನ್ನು ಗಮನಿಸಬಹುದು. ರಾಗ - ದ್ವೇಷಗಳಿಲ್ಲದ ಆತ್ಮದ ಸೂಚನೆಗಳು ಸುಷ್ಪಷ್ಟವಾಗಿ ಮಾರ್ಗದರ್ಶನ ಮಾಡುತ್ತವೆ. ಪೂರ್ವಗ್ರಹಗಳಿಲ್ಲದ ಪರಿಶುದ್ಧ ಕರ್ಮ ಮಾಡಲು, ಶಾಶ್ವತ ಸತ್ಯವನ್ನು ಸಾರುವ ಪೂರ್ಣ ಜ್ಞಾನ ಪಡೆಯಲು, ಸ್ವಾತ್ಮನ ಮಾತನ್ನು ಕೇಳಬೇಕು. ಆಗ ಆಂತರ್ಯದ ಕಿವುಡುತನ ಕಳೆಯುತ್ತದೆ. ಇದಲ್ಲದೆ ಕೇವಲ ಬಾಹ್ಯಕ್ಕೆ ಕಿವಿಯಾಗಿ ಬೇರೆಯವರ ಸಲಹೆಗಳನ್ನಷ್ಟೇ ಕೇಳುತ್ತಿದ್ದರೆ ಕಿವುಡಾದಂತೆಯೇ ಸರಿ ಎನ್ನುತ್ತಾರೆ ಅಲ್ಲಮರು.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ
ಎಲ್ಲರೊಂದಿಗೂ ತಿಳಿದ, ತಿಳಿಯದ ವಿಷಯಗಳನ್ನೆಲ್ಲ ಮಾತನಾಡುತ್ತಲೇ ಇರುತ್ತೇವೆ. ಆದರೆ ನಮ್ಮೊಂದಿಗೆ ಮಾತನಾಡುವುದನ್ನು ಮರೆತಿದ್ದೇವೆ. ಸಮಸ್ಯೆಗಳು ನಮ್ಮದಾಗಿದ್ದರೂ ಅದನ್ನು ನಮ್ಮ ಆಂತರ್ಯದೊAದಿಗೆ ಚರ್ಚಿಸದೆ ಬೇರೆಯವರೊಂದಿಗೆ ಚರ್ಚಿಸಲು ತೊಡಗುತ್ತೇವೆ. ಪರಿಹಾರಗಳು ನಮ್ಮೊಳಗೇ ಇದ್ದರೂ, ಅದನ್ನು ಬೇರೆಯವರಿಂದ ಪಡೆಯಲು ಬಯಸುತ್ತೇವೆ. ನಮ್ಮನ್ನು ನಾವೇ ತಿಳಿಯಬೇಕಾದರೆ ನಮ್ಮೊಂದಿಗೆ ನಾವು ಮಾತನಾಡಲೇಬೇಕು. ನಮ್ಮೊಳಗಿರುವ ಚೇತನದೊಂದಿಗೆ ಸಂವಹನ ನಡೆಸಲು ಸಾಧ್ಯವಾಗದಿದ್ದರೆ ನಾವು ಮೂಕರು, ಮನಸ್ಸಿನ ಪರಿವರ್ತನೆ ಆಗದೆ ಮಾತಿನ ಸೌಂದರ್ಯ ನಿರರ್ಥಕ ಎಂದು ಪ್ರಭುದೇವರು ಹೇಳುತ್ತಾರೆ.
ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು, ದಿಟದಿಂದ ತನ್ನ ತಾ ಮಾತಾಡಬೇಕು.
ದಿಟ್ಟತನದಿಂದ ತನ್ನನ್ನೇ ತಾನು ನೋಡಿ ಆತ್ಮಾವಲೋಕನ ಮಾಡಿಕೊಳ್ಳುವ, ತನ್ನ ಅಂತರಾಳದ ಮಾತುಗಳನ್ನೇ ಕೇಳುವ, ಅಂತರಾತ್ಮನೊದಿಗೆ ಮಾತನಾಡುವ ದಾರಿಯಲ್ಲಿ ಸಾಗಬೇಕು. ಅದು ಧೀರತೆ. ಉಪನಿಷತ್ತಿನಲ್ಲಿ ಹೇಳುವಂತೆ
“ಕಶ್ಚಿಧ್ಧೀರಃ ಪ್ರತ್ಯಗಾತ್ಮಾನಮೈಕ್ಷತ ವ್ಯಾವೃತ್ತಚಕ್ಷುಃ ಅಮೃತತ್ವಮಿಚ್ಛನ್” ಎನ್ನುವಂತೆ, ಅಂದರೆ ಅಮೃತತ್ವದ ಅಪೇಕ್ಷೆಯುಳ್ಳ ಅಂತರ್ಮುಖಿ ಯಾದ ಯಾವನೋ ಒಬ್ಬ ಧೀರನು ತನ್ನಂತರಂಗದಲ್ಲಿರುವ ಆತ್ಮ ತತ್ವವನ್ನು ತಿಳಿದುಕೊಳ್ಳುವನು. ಆತ್ಮ ಸ್ವರೂಪನನ್ನು ಅಂತರಂಗದಲ್ಲಿ ದರ್ಶಿಸುತ್ತಾ, ಅಂತರಾತ್ಮನ ಧ್ವನಿಯನ್ನು ಕೇಳುತ್ತಾ, ತನ್ನ ಮೂಲ ಸ್ವರೂಪದೊಂದಿಗೆ ಮಾತನಾಡಬೇಕು. ಆಗ ಆತ್ಮಜ್ಞಾನ ಜಾಗೃತವಾಗಿ ಸತ್ಯದ ಅರಿವಾಗುತ್ತದೆ. ಸತ್ಯದ ಅರಿವಾದಾಗ ವಿವೇಕದಿಂದ ವರ್ತಿಸುವ ಸಾಮರ್ಥ್ಯ ಬಲಿಯುತ್ತದೆ. ಆ ಸಾಮರ್ಥ್ಯ ಅಂತರಂಗ - ಬಹಿರಂಗದ ವಿಷಯಗಳನ್ನು ವಿವೇಚನೆಯಿಂದ ಸಮರ್ಥವಾಗಿ ನಿರ್ವಹಿಸುತ್ತದೆ.
ಇದೇ ತನ್ನ ನೆಲೆ ಸ್ವಭೂಮಿ ಸ್ವ ಸ್ವರೂಪ ಕಾಣಾ ಗುಹೇಶ್ವರಾ.
`ತನ್ನ’ ಎಂದರೆ ಚೈತನ್ಯ ಸ್ವರೂಪ, ಆತ್ಮ. ನಾಕುತಂತಿಯಲ್ಲಿ ನಾನು, ನೀನು, ಆನು, ತಾನು ಎನ್ನುತ್ತಾ ಬೇಂದ್ರೆ ಹೇಳುವ `ತಾನು’ ಎಂದರೆ ಎಲ್ಲವನ್ನೂ ಒಳಗೊಂಡ ಬ್ರಹ್ಮ ಸ್ವರೂಪವೇ ತನ್ನ ನೆಲೆ. ಇದೇ ಸ್ವ ಭೂಮಿ. ಎಂದರೆ ಕರ್ಮ ಭೂಮಿ, ಕಾರ್ಯ ಕ್ಷೇತ್ರಗಳೆಲ್ಲವೂ ಸ್ವಾತ್ಮನ ನೆಲೆಯಿಂದಲೇ ಆಗಬೇಕು. ಇದು ನಮ್ಮ ಮೂಲ. ಮೂಲಕ್ಕೆ ಅನುಗುಣವಾಗಿ ವರ್ತಿಸಿದಾಗ ಮಾತ್ರ ಅಂತರಂಗ - ಬಹಿರಂಗದ ಕ್ರಿಯೆಗಳೆಲ್ಲವೂ ಸ್ವಂತಿಕೆ ಪಡೆಯುತ್ತವೆ. ಅನುಭವಕ್ಕೆ ಮಾತ್ರ ನಿಲುಕುವ ದರ್ಶನ ಇದು. ಬಾಹ್ಯವನ್ನೆಲ್ಲ ಇಂದ್ರಿಯಗಳ ಮೂಲಕ ಗ್ರಹಿಸಬಹುದು. ಆದರೆ ನಮ್ಮನ್ನೇ ನಾವು ಇಂದ್ರಿಯಗಳ ಮೂಲಕ ಗ್ರಹಿಸಲಾರೆವು. ನಮ್ಮ ಚಿಂತನೆಗಳಿಗೆ ಕೇವಲ ಸಾಕ್ಷಿಯಾಗಿ ನಿಂತಾಗ ಮಾತ್ರ ನಮ್ಮನ್ನು ನಾವು ಗ್ರಹಿಸಿ ಅನುಭವಕ್ಕೆ ತಂದುಕೊಳ್ಳಲು ಸಾಧ್ಯ. ಇಲ್ಲಿ ಸ್ವರೂಪ ಸಾಕ್ಷಾತ್ಕಾರವೇ ಕೇಂದ್ರ ಭಾವ. ನಮ್ಮೊಳಗಿನ ಅಂತಃಸತ್ವವನ್ನು ಅರಿಯುವುದೇ ಸ್ವ ಸ್ವರೂಪದ ಅರಿವು. ಅದೇ ಪ್ರಭುದೇವರು ಹೇಳುವ ಆತ್ಮದರ್ಶನ.
ಶ್ರೀಸಿದ್ದೇಶ್ವರ ಸ್ವಾಮಿಗಳ ಚರಣಗಳಿಗೆ ಶ್ರದ್ಧಾಪೂರ್ವಕ ಅರ್ಪಣೆ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು