ದೊಡ್ಡಬಳ್ಳಾಪುರ: ತಾಲ್ಲೂಕಿನ ಅಂಚೆ ಕಚೇರಿ ಕೇಂದ್ರ ಮುಂಭಾಗ ಗ್ರಾಮೀಣ ಅಂಚೆ ನೌಕರರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.ಈ ವೇಳೆ ಮಾತನಾಡಿದ ನೌಕರ ಮುರಳೀಧರ್ ಗೌಡ ಚನ್ನಪಟ್ಟಣ ಅಂಚೆ ವಿಭಾಗದ ಕನಕಪುರ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಚನ್ನಪಟ್ಟಣ ಉಪವಿಭಾಗದ ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ.
ಕಮಲೇಶಚಂದ್ರ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗ್ರಾಮೀಣ ಅಂಚೆ ನೌಕರರ ಉಳಿವಿಗಾಗಿ ಈ ವರದಿಯು ತುಂಬಾ ಅನಿವಾರ್ಯವಾಗಿರುತ್ತದೆ ಅಲ್ಲದೆ ಅನುಭವದ ಆಧಾರದ ಮೇಲೆ ಕೆಲಸದ ಅವಧಿ ಹೆಚ್ಚಿಸಿ, ಮೂರು ರೀತಿಯ ಹೆಚ್ಚುವರಿ ಭತ್ಯೆಯನ್ನು ನೀಡುವಂತೆ ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.
ನೌಕರರ ಬೇಡಿಕೆಗಳು: 1) 8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸುವುದು. 2) ಸೇವಾ ಹಿರಿತನದ ಆಧಾರದ ಮೇಲೆ 12-24-36 ವರ್ಷ ಸೇವೆ ಸಲ್ಲಿಸಿದ ಗ್ರಾಮೀಣ ಅಂಚೆ ನೌಕರರಿಗೆ ವಿಶೇಷ ಇನ್ಕ್ರಿಮೆಂಟ್ ನೀಡುವುದು. 3) ಗ್ರಾಚ್ಯುಟಿ ಮೇಲಿನ ಗರಿಷ್ಠ ಮೊತ್ತವಾದ ಒಂದೂವರೆ ಲಕ್ಷ ಮಿತಿಯನ್ನು ತೆಗೆದುಹಾಕಿ ಕಮಲೇಶಚಂದ್ರ ಸಮಿತಿಯು ಶಿಫಾರಸ್ಸು ಮಾಡಿದಂತೆ ಗರಿಷ್ಠ 5 ಲಕ್ಷವರೆಗೆ ಮೊತ್ತವನ್ನು ನೀಡಬೇಕು. 4) ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. 5) ನೌಕರರಿಗೆ 30 ದಿನಗಳ ವೇತನ ಸಹಿತ ರಜೆ ನೀಡಬೇಕು. ಮತ್ತು ಏಳನೇ ವೇತನ ಆಯೋಗದ ಶಿಫಾರಸ್ಸಿನಿಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. 6) ಗ್ರೂಪ್ ಇನ್ಸುರೆನ್ಸ್ ಕವರೇಜ್ ರೂ. 5 ಲಕ್ಷ ರೂ. ಗಳ ವರೆಗೆ ಹೆಚ್ಚಿಸುವುದು.
ಈ ಪ್ರತಿಭಟನೆಯಲ್ಲಿ ಎಐಜಿಡಿಎಸ್ ಯು ಸಂಘಟನೆಯ ಜೆ ಮುರಳೀಧರ್ ಗೌಡ, ನೌಕರರಾದ ಚೇತನ, ಮೋಹನ್, ಸವಿತಾ, ಅಶ್ವತಪ್ಪ, ಕೃಷ್ಣಪ್ಪ, ಗೋವಿಂದರಾಜು, ವೆಂಕಟೇಶ, ಜ್ಯೋತಿ, ಕವಿತಾ, ಗೀತಾ ಮತ್ತಿತ್ತರರು ಇದ್ದರು.