ಬೆಂಗಳೂರು: ರಾಜ್ಯಸಭೆಗೆ ಅತೀಶೀಘ್ರದಲ್ಲೇ ಚುನಾವಣೆ ಎದುರಾಗಿದ್ದು, ಜೆಡಿಎಸ್ ಬಿಜೆಪಿ ಪಕ್ಷದಿಂದ ಮೈತ್ರಿ ಅಭ್ಯರ್ಥಿ ಯಾರೂ ಎಂಬುದರ ಬಗ್ಗೆ ಚರ್ಚೆ ನಡೆಯತೊಡಗಿದೆ.
ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಿಂದ ಮೂವರು ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ಆಯ್ಕೆಯಾಗಲಿದ್ದಾರೆ.
ಮತ್ತೋರ್ವ ಅಭ್ಯರ್ಥಿಗಾಗಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಾರೋ? ಅಥವಾ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೋ ಎಂಬ ಕುತೂಹಲ ಮೂಡಿಸಿದೆ.
ಆಯ್ಕೆಯಾಗಬೇಕಾಗಿರುವ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳು ಕಾಂಗ್ರೆಸ್ಗೆ ಹೋದರೆ ಕೇವಲ ಒಂದು ಸ್ಥಾನ ಮಾತ್ರ ಉಳಿದುಕೊಳ್ಳುತ್ತದೆ. ಈ ಸ್ಥಾನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಮತ್ತೆ ಆಯ್ಕೆ ಮಾಡಲು ಜೆಡಿಎಸ್ ಒಲವು ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಅವರು ಸಹ ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ದೇವೇಗೌಡರು ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿಯಿಂದ ಯಾರೂ ಅಭ್ಯರ್ಥಿ ಇಲ್ಲದಂತಾಗುತ್ತದೆ. ಈಗಾಗಲೇ ರಾಜ್ಯ ಬಿಜೆಪಿ ಘಟಕದ ಪ್ರಮುಖರು ತಮ್ಮ ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಅಬ್ಯರ್ಥಿಯನ್ನಾಗಿಸಿಬೇಕು ಎಂದು ಕೇಂದ್ರದ ವರಿಷ್ಠರಿಗೆ ಶಿಫಾರಸ್ಸು ಮಾಡಿ ಪತ್ರವನ್ನು ಬರೆದಿದ್ದಾರೆ ಎಂದು ಹೇಳಲಾಗಿದೆ.
ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ರಾಜ್ಯ ಘಟಕ ಬದ್ಧ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಬಿಜೆಪಿ ಜೆಡಿಎಸ್ ಮೈತ್ರಿ ಯಾವ ತಿರುವು ಪಡೆಯುತ್ತಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ವಿಧಾನ ಪರಿಷತ್ನ ಚುನಾವಣೆಯಲ್ಲೂ ಸಹ ತಮ್ಮ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು. ಹಿರಿಯೂರು ಕ್ಷೇತ್ರದಲ್ಲಿ ಎದುರಾಗುವ ವಿಧಾನಸಭೆ ಉಪಚುನಾವಣೆಗೂ ತಮ್ಮ ಅಭ್ಯರ್ಥಿಗೆ ಅವಕಾಶ ಬೇಕೇ ಬೇಕು ಎಂದು ಪಟ್ಟು ಹಿಡಿಯುತ್ತಿರುವ ಜೆಡಿಎಸ್ ಜಿಬಿಎ ಚುನಾವಣೆಯಲ್ಲೂ ಹೆಚ್ಚಿನ ಪಾಲು ಕೇಳುತ್ತಿದೆ. ಈ ಎಲ್ಲವೂ ಎರಡು ಮೂರು ತಿಂಗಳ ಅವಧಿಯಲ್ಲೇ ಎದುರಾಗುವುದರಿಂದ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲೇ ನಡೆಯುತ್ತಿರುವ ಬೆಳವಣಿಗೆಗಳು ಯಾವ ತಿರುವು ಪಡೆಯುತ್ತವೆ ಎಂದು ಕಾದು ನೋಡಬೇಕಿದೆ.
ರಾಜ್ಯಸಭಾ ಚುನಾವಣೆ | ಮೈತ್ರಿ ಅಭ್ಯರ್ಥಿ ಗೊಂದಲ



