ಶಿಡ್ಲಘಟ್ಟ: ಶಿಡ್ಲಘಟ್ಟದಲ್ಲಿ ಅಕ್ಷಯಪಾತ್ರ ಸಂಸ್ಥೆಯ ಅತ್ಯಾಧುನಿಕ 81 ನೇ ಅಡುಗೆ ಮನೆಯನ್ನು ಇಂದು ಬೆಳ್ಳೂಟಿಯಲ್ಲಿ ಉದ್ಘಾಟನೆ ಮಾಡಿದ್ದು, ತಾಲ್ಲೂಕಿನ 5,000 ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕ ಬಿಸಿಯೂಟ ಸಿಗಲಿದೆ.
ದೇಶದಲ್ಲೇ ಸಂಸ್ಥೆಯ 81ನೇ ಘಟಕ ಆರಂಭ; ಬೆಳ್ಳಿಹಬ್ಬದ ವರ್ಷದಲ್ಲಿ ಮತ್ತೊಂದು ಮೈಲಿಗಲ್ಲು ಎಂದು ಅಕ್ಷಯಪಾತ್ರೆ ಫೌಂಡೇಶನ್ ಹೇಳಿದೆ. ಇದೊಂದು ಲಾಭರಹಿತ ಸೇವೆ. ಸಂಸ್ಥೆಯು ಅಕ್ಷಯಪಾತ್ರ ಫೌಂಡೇಶನ್, ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿಯಲ್ಲಿ ತನ್ನ ಹೊಚ್ಚ ಹೊಸ ಅತ್ಯಾಧುನಿಕ ಕೇಂದ್ರೀಕೃತ ಅಡುಗೆ ಮನೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದು ಇದು ದೇಶಾದ್ಯಂತ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಅಕ್ಷಯಪಾತ್ರೆ ಸಂಸ್ಥೆ ಆರಂಭಿಸಿದ್ದೇವೆ. ಸಂಸ್ಥೆಯ ಬೆಳ್ಳಿಹಬ್ಬದ ವರ್ಷದಲ್ಲೇ ಈ ಘಟಕ ಉದ್ಘಾಟನೆಗೊಂಡಿರುವುದು ವಿಶೇಷವಾಗಿದೆ ಎಂದು ಫೌಂಡೇಶನ್ ಮುಖ್ಯಸ್ಥರು ಹೇಳಿದ್ದಾರೆ..ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಯೋಜನೆಯಡಿ ಆರಂಭವಾಗಿರುವ ಈ ಹೊಸ ಘಟಕವು, ಶಿಡ್ಲಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 5,000 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ತಾಜಾ, ಬಿಸಿ ಹಾಗೂ ಶುಚಿ-ರುಚಿಯಾದ ಪೌಷ್ಟಿಕ ಬಿಸಿಯೂಟವನ್ನು ಉಣಬಡಿಸಲು ಸಜ್ಜಾಗಿದೆ. ಈ ಯೋಜನೆಯು ರಾಜ್ಯ ಸರ್ಕಾರದ ಹೆಮ್ಮೆಯ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಲಿದ್ದು, ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಗೂ ಪೂರಕವಾಗಿ ಕೆಲಸ ಮಾಡಲಿದೆ.ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ಕಾರ್ಪೊರೇಟ್ ಪಾಲುದಾರರು ಹಾಗೂ ದಾನಿಗಳ ಆರ್ಥಿಕ ನೆರವಿನೊಂದಿಗೆ ಯಶಸ್ವಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಕ್ಷಯಪಾತ್ರೆ ಕಾರ್ಯನಿರ್ವಹಿಸುತ್ತಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ತರಗತಿಯ ಮಕ್ಕಳ ಹಸಿವನ್ನು ಸಂಪೂರ್ಣವಾಗಿ ನೀಗಿಸಲು ಸಂಸ್ಥೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಬಿಸಿಯೂಟದ ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಮಕ್ಕಳ ಶಾಲಾ ದಾಖಲಾತಿ ಹೆಚ್ಚಿರುವುದಲ್ಲದೆ, ಮಕ್ಕಳ ಶೈಕ್ಷಣಿಕ ಪ್ರದರ್ಶನ ಹಾಗೂ ಆರೋಗ್ಯ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.
ಅಕ್ಷಯಪಾತ್ರ ಸಂಸ್ಥೆಯು ವಿಶ್ವದಲ್ಲೇ ಅತಿ ದೊಡ್ಡ ತಂತ್ರಜ್ಞಾನ ಆಧಾರಿತ ಮತ್ತು ಸ್ವಯಂಚಾಲಿತ ಅಡುಗೆ ಮನೆಗಳ ಜಾಲವನ್ನು ಹೊಂದಿದೆ. ಇಲ್ಲಿ ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಕರ, ಅತ್ಯಾಧುನಿಕ ಯಂತ್ರಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತದೆ.
2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಅಕ್ಷಯಪಾತ್ರ, ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ಸಾಮಾಜಿಕ ಚಳವಳಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, 25,000 ಕ್ಕೂ ಹೆಚ್ಚು ಶಾಲೆ ಹಾಗೂ ಅಂಗನವಾಡಿಗಳ ಒಟ್ಟು 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಪೌಷ್ಟಿಕಾಹಾರ ಒದಗಿಸುತ್ತಿದೆ.
ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದರೆ ಸಮಾಜದಲ್ಲಿ ಎಂತಹ ಅದ್ಭುತ ಬದಲಾವಣೆ ತರಬಹುದು ಎಂಬುದಕ್ಕೆ ಈ ಶಿಡ್ಲಘಟ್ಟದ ಹೊಸ ಘಟಕವೇ ಸಾಕ್ಷಿಯಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಶ್ಲಾಘಿಸಿದರು.
ಚಿಂತಾಮಣಿ ವಿಧಾನಸಭಾ ಶಾಸಕರು ಹಾಗೂ ಮಾಜಿ ಸಚಿವರಾದ ಡಾ: ಎಂ. ಸಿ. ಸುಧಾಕರ್, ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ನವೀನ್ ಭಟ್, ತಾಲ್ಲೂಕು ಪಂಚಾಯತ್ ಅಧಿಕಾರಿ ಹೇಮಾವತಿ ಸೇರಿದಂತೆ ಇತರರಿದ್ದರು.
ಶಿಡ್ಲಘಟ್ಟ: ಮಧ್ಯಾಹ್ನ ಬಿಸಿಯೂಟ ಅಕ್ಷಯ ಪಾತ್ರೆ ಇಂದಿನಿಂದ ಆರಂಭ



