ಬೇಲೂರು: ನಗರದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಶಾಸಕ ಹೆಚ್.ಕೆ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಆಶ್ರಯ ಯೋಜನೆಯಡಿ ಅರ್ಹ ಬಡ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮತ್ತು ಹಕ್ಕುಪತ್ರ ವಿತರಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಹೆಚ್.ಕೆ. ಸುರೇಶ್, ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಯಾವುದೇ ವಿಳಂಬವಾಗದಂತೆ ನಿವೇಶನ ಹಾಗೂ ಸ್ವಾಧೀನ ಪತ್ರಗಳನ್ನು ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲು ಪ್ರತಿ ವಾರ ಸಭೆ ನಡೆಸಬೇಕು ಎಂದು ತಿಳಿಸಿದರು.
ಅರ್ಹ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ವಿವಾಹಿತರಾಗಿದ್ದು, ಯಾವುದೇ ಜಮೀನು, ಸೈಟ್ ಅಥವಾ ಆದಾಯದ ಮೂಲ ಹೊಂದಿರದ ನೈಜ ಬಡ ಕುಟುಂಬಗಳಿಗೆ ಮಾತ್ರ ಯೋಜನೆಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಹೇಳಿದರು. ನಿವೇಶನಗಳನ್ನು ಫಲಾನುಭವಿಗಳ ಮೂಲ ಹೆಸರಿನಲ್ಲೇ ಮಂಜೂರು ಮಾಡಲಾಗುವುದು ಎಂದರು.
ಆಶ್ರಯ ಯೋಜನೆಗಾಗಿ ಮೀಸಲಿಟ್ಟಿರುವ 5 ಎಕರೆ ಜಾಗದ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋತ್ಥಾನ ಯೋಜನೆಯಡಿ 30 ಲಕ್ಷ ರೂ. ವಿಶೇಷ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಜಾಗದ ಗಡಿ ಗುರುತಿಸು
ವಿಕೆ, ಸ್ಥಳ ಪರಿಶೀಲನೆ, ಸಮತಟ್ಟುಗೊಳಿಸುವಿಕೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪುರಸಭೆ ಅಧ್ಯಕ್ಷ ಅಕ್ರಮ್ ಷರೀಫ್ ಮಾತನಾಡಿ, ಮುಂದಿನ ಶುಕ್ರವಾರ ಸಂಪೂರ್ಣ ಮಾಹಿತಿಯುಳ್ಳ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯಲಾಗುವುದು. ಬಳಿಕ ಸೋಮವಾರದಿಂದ ಹಕ್ಕುಪತ್ರ ಹಾಗೂ ಸ್ವಾಧೀನ ಪತ್ರ ವಿತರಣಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.ಆಶ್ರಯ ಸಮಿತಿ ಸದಸ್ಯ ಇಕ್ಬಾಲ್ ಮಾತನಾಡಿ, ನ್ಯಾಯಾಲಯದ ವ್ಯಾಜ್ಯದ
ನೆಪವೊಡ್ಡಿ ಆಶ್ರಯ ಯೋಜನೆಯ ಕಾಮಗಾರಿಗಳನ್ನು ವಿಳಂಬಗೊಳಿಸಬಾರದು ಎಂದು ಆಗ್ರಹಿಸಿದರು. ನ್ಯಾಯಾಲ
ಯದಿಂದ ಅಧಿಕೃತ ತಡೆಯಾಜ್ಞೆ ಬಂದರೆ ಮಾತ್ರ ಕಾಮಗಾರಿ ಸ್ಥಗಿತಗೊಳಿಸಬೇಕು. ಕೇವಲ ಪ್ರಕರಣ ದಾಖಲಾಗಿರುವ ಕಾರಣಕ್ಕೆ ಯೋಜನೆಯನ್ನು ನಿಲ್ಲಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.ಯೋಜನೆಗೆ ಮಂಜೂರಾಗಿರುವ 5 ಎಕರೆ ಜಾಗದಲ್ಲಿ ಕೇವಲ 2 ಎಕರೆ 17 ಗುಂಟೆ ಪ್ರದೇಶಕ್ಕೆ ಮಾತ್ರ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಉಳಿದ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಅವರು ಹೇಳಿದರು. ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸುವಂತೆ ಸಲಹೆ ನೀಡಿದರು.
ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಮಾತನಾಡಿ, ಆಶ್ರಯ ಯೋಜನೆಗಾಗಿ 5 ಎಕರೆ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಒಂದೇ ಕಡೆ ಸಂಪೂರ್ಣ 5 ಎಕರೆ ಖಾಲಿ ಜಾಗ ಲಭ್ಯವಾಗಿರಲಿಲ್ಲ. ಮಧ್ಯದಲ್ಲಿನ ಕೆಲವು ಜಾಗಗಳು ಬೇರೆ ಉದ್ದೇಶಗಳಿಗೆ ಮೀಸಲಾಗಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಿಂದಿನ ಅಧಿಕಾರಿಗಳು ಪ್ರಕ್ರಿಯೆ ನಡೆಸಿದ್ದರು ಎಂದು ವಿವರಿಸಿದರು.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಪಿಐ ರೇವಣ್ಣ, ಆರೋಗ್ಯಾಧಿಕಾರಿ ಲೋಹಿತ್, ಆರ್.ಒ. ಗೋಪಿ, ಇಂಜಿನಿಯರ್ ಮೋಹನ್ ಹಾಗೂ ಆಶ್ರಯ ಸಮಿತಿ ಸದಸ್ಯರಾದ ಬಿ.ಸಿ. ಹರೀಶ್, ನಾಗರಾಜು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಆಶ್ರಯ ಯೋಜನೆಗೆ ವೇಗ: ಅರ್ಹ ಬಡವರಿಗೆ ಶೀಘ್ರ ನಿವೇಶನ ಹಂಚಿಕೆಗೆ ಕ್ರಮ



