ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ನಿನ್ನೆ ಆಸಿಡ್ ದಾಳಿ ನಡೆದಿತ್ತು. ಸದ್ಯ ವಿದ್ಯಾರ್ಥಿನಿಯರು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದಾರೆ.
ಸಂತ್ರಸ್ಥ ವಿದ್ಯಾರ್ಥಿನಿಯರು ಮಂಗಳೂರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡಾ.ನಾಗಲಕ್ಷ್ಮೀ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿನಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಆಸಿಡ್ ಸಂತ್ರಸ್ತರ ಭೇಟಿ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿದ್ದು, ಸಂತ್ರಸ್ತ ಯುವತಿಯರು ನನ್ನಲ್ಲಿ ಭಾವುಕರಾಗಿ ಮಾತನಾಡಿದರು. ಅವರು ಪರೀಕ್ಷೆ ಬಗ್ಗೆನೇ ಕೇಳ್ತಾ ಇದ್ದರು.
ನಾನು ಒಬ್ಬಳುತಾಯಿ ನನಗೆ ಅರ್ಥ ಆಗುತ್ತೆ. ಮಕ್ಕಳ ಮಾನಸಿಕಸ್ಥಿತಿ ಗತಿ ಹೇಗಿರುತ್ತೆ ಎಂದು. ಶಿಕ್ಷಣ ಸಚಿವರನ್ನ ಇಂದು ನಾನು ಭೇಟಿಯಾಗುತ್ತೇನೆ. ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ. ಆಸಿಡ್ ದಾಳಿಯಿಂದ ಆದ ಗಾಯದ ಗಂಭೀರತೆ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತೆ. ಸರಕಾರ ಪೊಲೀಸ್ ಇಲಾಖೆಯಿಂದ ಏನೇನು ಪರಿಹಾರ ಬೇಕೋ ಅದನ್ನ ಕೊಡಿಸುತ್ತೇವೆ.
ಎರಡು ವಾರದ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು. ಇಬ್ಬರು ಮಕ್ಕಳಿಗೆ ಮಾಡಬೇಕಾಗುತ್ತೆ. ಪ್ಲಾಸ್ಟಿಕ್ ಬಾಟಲ್ನಲ್ಲಿ ಆಸಿಡ್ತಂದಿದ್ದರಿಂದ ಯುವತಿಯರು ಬಚಾವ್ ಆಗಿದ್ದಾರೆ.ಗ್ಲಾಸ್ ಬಾಟಲ್ ನಲ್ಲಿ ಎರಚಿದ್ದರೆ ಗಾಯಗಳು ಗಂಭೀರವಾಗುತ್ತಿತ್ತು. ಇಂದು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸುತ್ತೇನೆ. ತಕ್ಷಣ ಪರಿಹಾರವಾಗಿ ತಲಾ ನಾಲ್ಕು ಲಕ್ಷ ಸರಕಾರದಿಂದ ಕೊಡಿಸುತ್ತೇವೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ವ್ಯವಸ್ಥೆ ಮಾಡುತ್ತೇವೆ ಎಂದರು.