ಬೆಂಗಳೂರು: ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಗಳು ಎಂದು ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅಭಿಪ್ರಾಯ ಪಟ್ಡರು.ಅವರು ಬೆಂಗಳೂರಿನ ಕಲಾಗ್ರಾಮದಲ್ಲಿ ಕಲಾಭೂಮಿ ಟ್ರಸ್ಟ್ ಏರ್ಪಡಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳಂತೆ ರೂಪಿಸುತ್ತಿದ್ದಾರೆ. ಅದರಿಂದ ಮಕ್ಕಳು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಮಕ್ಕಳು ವಿದ್ಯೆಯ ಜೊತೆಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು, ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವ ಸಂಸ್ಕಾರವನ್ನೂ ಕಲಿಯಬೇಕು. ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ನೃತ್ಯ, ಸಂಗೀತ, ನಾಟಕಗಳ ಜೊತೆಗೆ ಬದುಕಿನ ಪಾಠವನ್ನು ಹೇಳಿಕೊಡುತ್ತಾರೆ, ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಬುದ್ದಿಯೂ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಯೋಗೇಶ್ ಮಾಸ್ಟರ್, ಮಕ್ಕಳಿಗೆ ಹೀಗೆ ಮಾಡು ಎಂದು ಹೇಳುವ ಅಧಿಕಾರ ಮತ್ತು ಹಕ್ಕು ಪಾಲಕರಿಗೆ ಇಲ್ಲ. ನಾವು ಮಕ್ಕಳನ್ನು ನಮ್ಮ ಬಯಕೆಗೆ ತಕ್ಕ ಹಾಗೆ ಬೆಳೆಸಲು ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳನ್ನು ಅವರು ಬಯಸಿದಂತೆ ಬೆಳೆಯಲು ಬಿಡಿ, ನಾವು ಮಕ್ಕಳನ್ನು ನಮ್ಮ ಕಾಲಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತಿದ್ದೇವೆ, ನಾವು ಅವರ ಕಾಲಕ್ಕೆ ಅಪ್ ಡೇಟ್ ಆಗಬೇಕು ಎಂದರು.
ಅಖಿಲ ಕರ್ನಾಟಕ ಸಂಗೀತ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್. ಎ. ಛಾಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಅವರಲ್ಲಿರುವ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು. ನಮ್ಮ ಮಗು ಇದನ್ನೇ ಕಲಿಯಬೇಕು ಎಂದು ಒತ್ತಡ ಹೇರಬಾರದು ಎಂದು ಹೇಳಿದರು.
ಚಿತ್ರನಟ ಮುನಿಕೃಷ್ಣ, ಬಾಲನಟ ಮಾಸ್ಟರ್ ತರುಣ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಲಾಭೂಮಿ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಲಕ್ಷ್ಮಣ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಾಡು, ನೃತ್ಯ, ಗುರು ಶಿಷ್ಯರು ಹಾಗೂ ಕಲಾ ಕೌಸ್ತುಭ ತಂಡದಿAದ ಪೂರ್ಣಿಮಾ ಪವಾರ್ ನಿರ್ದೇಶನದಲ್ಲಿ ಶಂಕರ ಪಾಗೋಜಿ ಬರೆದಿರುವ ಶರಣ ಸಂಸಾರ ನಾಟಕ ಪ್ರದರ್ಶನವಾಯಿತು.
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವೂ ಮುಖ್ಯ ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಗಳು: ಹಿರಿಯ ಪತ್ರಕರ್ತ ಶಂಕರ ಪಾಗೋಜಿ



