ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಚಿವ ಸಂಪುಟವನ್ನು ಸ್ವಾಗತಿಸಿರುವ `ಮಾದಿಗ ಸಂಘಟನೆಗಳ ಒಕ್ಕೂಟ’, ಇದೇ ವೇಳೆ ಮಾದಿಗ ಹಾಗೂ ಅಲೆಮಾರಿ ಸಮುದಾಯಗಳಿಗೆ ದಶಕಗಳಿಂದ ಆಗುತ್ತಿರುವ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಡಾ. ಎನ್. ಮೂರ್ತಿ ಅವರು, ರಾಜ್ಯದ 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಪೈಕಿ ಮಾದಿಗ ಸಮುದಾಯದವರೇ ಬಹುಸಂಖ್ಯಾತರಾಗಿದ್ದರೂ ಸಹ ಕಳೆದ 75 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ಮಾದಿಗ ಹಾಗೂ 59 ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತ ಸೇರಿದಂತೆ ಕಳೆದ 13 ವರ್ಷಗಳಿಂದ ಈ ಸಮುದಾಯಗಳು ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ, ಮಾದಿಗ ಸಮುದಾಯದ ಹಿರಿಯ ರಾಜಕಾರಣಿ, 7 ಬಾರಿ ಸಂಸದರಾಗಿ ಮತ್ತು 2 ಬಾರಿ ಕೇಂದ್ರ ಸಚಿವರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಕೆ.ಎಚ್. ಮುನಿಯಪ್ಪ ಅವರಿಗೆ ತಕ್ಷಣವೇ ಉಪಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ನೇಮಿಸಬೇಕು ಎಂದು ಒಕ್ಕೂಟವು ಆಗ್ರಹಿಸಿದೆ.ಇದರೊಂದಿಗೆ ಸಮುದಾಯದ ಮತ್ತೊಬ್ಬ ಹಿರಿಯ ಹಾಗೂ ಮುತ್ಸದ್ದಿ ನಾಯಕರಾದ ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡಿ ಪ್ರಬಲ ಖಾತೆಯನ್ನು ಹಂಚಿಕೆ ಮಾಡಬೇಕು ಹಾಗೂ ನೂತನ ಸರ್ಕಾರದಲ್ಲಿ ಒಟ್ಟಾರೆಯಾಗಿ ಮಾದಿಗ ಸಮುದಾಯಕ್ಕೆ ಕನಿಷ್ಠ 3 ಸಚಿವ ಸ್ಥಾನಗಳನ್ನು ನೀಡುವ ಮೂಲಕ ಸಾಂವಿಧಾನಿಕ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಒಳಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುವ ಮೂಲಕ ಕಾಂಗ್ರೆಸ್ ಮಹಾ ಮೋಸ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದ ನಾಯಕರು, ಇಷ್ಟು ವರ್ಷಗಳ ಕಾಲ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ಸಮಾಜದ ಮತಗಳನ್ನು ಪಡೆದು ಕೇವಲ ಭರವಸೆಗಳನ್ನು ನೀಡಲಾಗಿದೆಯೇ ಹೊರತು ಯಾವುದೇ ನೈಜ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯದ ವಿರೋಧಿಯಾಗಿದ್ದು, ಮೀಸಲಾತಿ ಹಾಗೂ ಸರ್ಕಾರದಲ್ಲಿ ಸಚಿವ ಸ್ಥಾನ ಹಂಚಿಕೆಯಲ್ಲಿ ಸತತವಾಗಿ ಅನ್ಯಾಯ ಎಸಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ಅವರು, ಕಾಂಗ್ರೆಸ್ ಪಕ್ಷವು ದಲಿತ ಮಾದಿಗ ಶಾಸಕರಿಗೆ ಮತ್ತು ನಮ್ಮ ಸಮುದಾಯಕ್ಕೆ ದೌರ್ಜನ್ಯ ಎಸಗುತ್ತಿದ್ದು, ಇದೇ ಧೋರಣೆ ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ಇಡೀ ಸಮುದಾಯ ಒಗ್ಗಟ್ಟಾಗಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮಾದಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು `ಮಾದಿಗ ಸಂಘಟನೆಗಳ ಒಕ್ಕೂಟ’ ಆಗ್ರಹ



