ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೂ ದಲಿತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದೆ ಕಾಂಗ್ರೆಸ್ ಪಕ್ಷವು ದಲಿತರಿಗೆ ಇತಿಹಾಸ ಮರೆಯಲಾಗದಂತಹ ವಂಚನೆಯನ್ನು ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಓಟ್ ಬ್ಯಾಂಕ್ನಿಂದಲೇ 136 ಶಾಸಕರು ಗೆಲುವು ಸಾಧಿಸಲು ಸಾಧ್ಯವಾಯಿತು ಎಂಬುದು ಚುನಾವಣಾ ಸಮೀಕ್ಷೆಗಳಲ್ಲಿ ಸಾಬೀತಾಗಿದ್ದರೂ, ಸಮುದಾಯಕ್ಕೆ ಈ ಬಾರಿ ದೊಡ್ಡ ಅನ್ಯಾಯವಾಗಿದೆ ಎಂದು ಸಮಿತಿ ಪ್ರಮುಖರು ಹೇಳಿದ್ದಾರೆ.
ಈಗಾಗಲೇ ಡಿ.ಕೆ.ಶಿವಕುಮಾರ್ ರವರ ಮಂತ್ರಿಮAಡಲ ಅಸ್ತಿತ್ವಕ್ಕೆ ಬಂದಿದ್ದು, ಈ ಸಂಪುಟಕ್ಕೆ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ. ಕಳೆದ 1985ರಿಂದ ದಲಿತ ಸಮುದಾಯ ಮತ್ತು ಸಂಘಟನೆಗಳ ಜೊತೆ ಬೆಳೆದು ಬಂದಿರುವ ಡಾ. ಮಹದೇವಪ್ಪ ಅವರು ಸಿದ್ದರಾಮಯ್ಯನವರ ಹಿಂದಿನ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸಂವಿಧಾನ ಪೀಠಿಕೆ ಜಾರಿ, ಬುದ್ಧ ನಿಗಮ ಸ್ಥಾಪನೆ ಹಾಗೂ ಒಳ ಮೀಸಲಾತಿ ಜಾರಿಯಂತಹ ಐತಿಹಾಸಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ಅಂದು ಬಸಲಿಂಗಪ್ಪ ಅವರಂತೆ ಇಂದು ಡಾ. ಮಹದೇವಪ್ಪ ಅವರು ದಲಿತ ಸಮುದಾಯದಲ್ಲಿ ಮನೆ ಮಾತಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ರವರ ಸಹಕಾರದಿಂದ ಬೆಳೆದುಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಮಂತ್ರಿಮAಡಲಕ್ಕೆ ಮಹದೇವಪ್ಪ ಅವರನ್ನು ಸೇರಿಸಿಕೊಂಡರೆ ಮಾತ್ರ ಆ ಸಂಪುಟಕ್ಕೆ ಗೌರವ ಮತ್ತು ತೂಕ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ದಲಿತರಿಗೆ ಆಗಿರುವ ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ. ಡಾ. ಮಹದೇವಪ್ಪ ಅವರಿಗೆ ಸಮಾಜ ಕಲ್ಯಾಣ ಮಂತ್ರಿ ಸ್ಥಾನ ನೀಡುವುದರ ಜೊತೆಗೆ, ದಲಿತ ಸಮುದಾಯದ ಇತರ ಪ್ರಮುಖ ನಾಯಕರಾದ ಶಿವರಾಜ ತಂಗಡಗಿ, ಎಸ್.ಎನ್. ನಾರಾಯಣಸ್ವಾಮಿ (ಬಂಗಾರಪೇಟೆ), ರೂಪಕಲಾ ಶಶಿಧರ್ (ಕೆ.ಜಿ.ಎಫ್.), ಶಿವಣ್ಣ (ಆನೇಕಲ್), ನರೇಂದ್ರಸ್ವಾಮಿ (ಮಳವಳ್ಳಿ), ಎ.ಆರ್. ಕೃಷ್ಣಮೂರ್ತಿ (ಕೊಳ್ಳೆಗಾಲ), ನಯನ ಮೋಟಮ್ಮ (ಮೂಡಿಗೆರೆ) ಪ್ರಸಾದ್ ಅಬ್ಬಯ್ಯ ಹಾಗೂ ಆರ್.ಬಿ. ತಿಮ್ಮಾಪುರ ಅವರಿಗೂ ಸಚಿವ ಸಂಪುಟದಲ್ಲಿ ಸೂಕ್ತ ಅವಕಾಶ ನೀಡಬೇಕು ಎಂದು ಈ ಮೂಲಕ ಜಂಟಿಯಾಗಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಾ. ಆರ್. ಅಶ್ವತ್ಥ ಅಂತ್ಯಜ, ರಾಜ್ಯ ಸಂಯೋಜಕರಾದ ನಾರಾಯಣದಾಸ್ ಹಾಸನ, ಕವಿ ಸಾಹಿತಿ ಪ್ರೊ. ಗಂಗರಾಜ್ ಚಂಡಾಲ ಮೈಸೂರು, ರಾಜ್ಯ ಸಂಯೋಜಕರು ಸಾಹಿತಿ ಮತ್ತು ಬರಹಗಾರರಾದ ಎಸ್.ಸಿ. ಶೈಲಜಾ ಕೋಲಾರ, ಸಾಹಿತಿ ಮಾಸ್ತಿ ಜಗನ್ನಾಥ್, ಚನ್ನಪಟ್ಟಣ ಅಬ್ಬಿಗೆರೆ ರಾಜಣ್ಣ, ಶಿವಮೊಗ್ಗ ಅತ್ತಿಗುಂದ ಕರಿಯಪ್ಪ, ರಾಯಚೂರು ಬೀಮಣ್ಣ ನಗನೂರು, ಹಾವೇರಿ ಗಾಳೆಮ್ಮನವರ್, ಬೀದರ್ ಜಿಲ್ಲೆ ಗುನ್ನಹಳ್ಳಿ ರಾಜ್ ಕುಮಾರ್, ನಂಜುAಡಪ್ಪ ಪಾಸ್ವಾನ್ ಕೋಲಾರ, ಕೆಂಚನಾಪುರ ಹನುಮಯ್ಯ, ಯಾದಗಿರಿ ಶರಣರೆಡ್ಡಿ, ವಾಲ್ಮೀಕಿ ಮುಖಂಡ ಚಿಂತಾಮಣಿ ಆ.ನಾ. ಪ್ರಸಾನ್, ರೈತ ಮುಖಂಡ ಬೆಗ್ಲಿರಾಮಚಂದ್ರೇಗೌಡ ಹಾಜರಿದ್ದರು.
ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದೆ ಕಾಂಗ್ರೆಸ್ನಿಂದ ವಂಚನೆ ಡಾ. ಮಹದೇವಪ್ಪ ಹಾಗೂ ಇತರರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ದಲಿತ ಸಂಘರ್ಷ ಸಮಿತಿ ಒತ್ತಾಯ



