ಬೆಂಗಳೂರು: ನನ್ನ ಸೋಲಿಗೆ ಯಾರು ಯಾರು ಕಾರಣ ಅಂತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಗೊತ್ತಿದೆ. ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ನಾನು ಸಿಡಿದೇಳ ಬೇಕಾಗುತ್ತದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರಿಪಡಿಸುವುದು, ಬಿಡುವುದು ಅವರಿಗೆ ಸೇರಿದ್ದು ಎಂದರು.
ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನಮ್ಮಂಥವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ಅವರಿಗೇ ಅಂಟಿಕೊಂಡು ಹೋಗ್ತೇನೆ ಅಂದರೇ ಬೇರೆ ಮಾತಾಡಬೇಕಾಗುತ್ತೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ನೀನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ನಮ್ಮಂತಹವರ ಮೇಲೆ ಗದಾಪ್ರಹಾರ ಆದರೆ ಪರಿಣಾಮ ಆಗುತ್ತದೆ.
ಎಷ್ಟರ ಮಟ್ಟಿಗೆ ಪರಿಣಾಮ ಆಗುತ್ತದೆ ಅಂತಾ ಚಿಂತನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು. ಚಾಮರಾಜನಗರ ಜಿಲ್ಲೆಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು ವಿಜಯೇಂದ್ರ ರಾಜ್ಯಾಧ್ಯಕ್ಷರು, ಎಲ್ಲಿಗೆ ಬೇಕಾದರೂ ಹೋಗಲಿ ಎಂದಿದ್ದಾರೆ.