ಚಾಮರಾಜನಗರ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (ಎಫ್ಎಲ್ಎನ್) ಸಾಮರ್ಥ್ಯಗಳನ್ನು ಸಾಧಿಸಿದರೆ, ಎಸ್ಎಸ್ಎಲ್ಸಿ ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ನ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳಿಗೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
2025-26ರ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶವು ಶೇಕಡ 91ರಷ್ಟು ಬಂದಿರುವುದು ಸಂತೋಷವಾಗಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ಶಿಕ್ಷಕರಿಗೆ ಅಭಿನಂದನೆಗಳು. ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ಸಾವು ಸಂಭವಿಸಿದ್ದರೂ ಮಕ್ಕಳಿಗೆ ಅನ್ಯಾಯವಾಗಬಾರದೆಂಬ ಕಾರಣಕ್ಕೆ ಶಾಲೆಗೆ ಬಂದು ಮಕ್ಕಳಿಗೆ ಗಣಿತ ಪಾಠ ಮಾಡಿದ್ದಾರೆ. ಇದು ಶಿಕ್ಷಕರ ಬದ್ದತೆ ತೋರುತ್ತದೆ ಎಂದರು.
ಸರ್ಕಾರವು ಪ್ರತಿ ವರ್ಷ ಸರ್ಕಾರಿ ಶಾಲೆಗೆ ಬರುವ ಪ್ರತಿ ಮಗುವಿನ ಮೇಲೆ ಸುಮಾರು 22,000 ರೂ.ಗಳನ್ನು ವಿನಿಯೋಗಿಸುತ್ತಿದೆ. ನಾವು ಈ ವರ್ಷ ಒಂದು ಕ್ರಿಯಾ ಯೋಜನೆಯನ್ನು ಹಾಕಿಕೊಂಡು ಮಕ್ಕಳ ಫಲಿತಾಂಶ ಪ್ರಗತಿ ಸಾಧಿಸಲು ಕಾರ್ಯ ಪ್ರವೃತ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್ ಜೀ ಫೌಂಡೇಷನ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ. 2026-27ನೇ ಸಾಲಿಗೆ ಶೇಕಡ 95ಕ್ಕೂ ಹೆಚ್ಚು ಫಲಿತಾಂಶ ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಅವರು ತಿಳಿಸಿದರು.
ಡಯಟ್ ಪ್ರಾಂಶುಪಾಲರಾದ ಕಾಶಿನಾಥ್ ಮಾತನಾಡಿ ಶಿಕ್ಷಣದ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಹೆಚ್ಚು ಆಸಕ್ತಿ ಮತ್ತು ಕಾಳಜಿ ಇದೆ. ಜೊತೆಗೆ ಈ ನಿಟ್ಟಿನಲ್ಲಿ ಅವರ ಕಾರ್ಯವೈಖರಿ ಉತ್ತಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್. ಚಂದ್ರಪಾಟೀಲ್ ಅವರು ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಪ್ರಗತಿ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಅವರ ಉನ್ನತಿಗಾಗಿ ನಾವು ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಾಗಿ ನಡೆಯುವ ಈ ಎರಡು ದಿನಗಳ ಕಾರ್ಯಾಗಾರವು ಹೆಚ್ಚು ಪುಷ್ಠಿ ನೀಡಲಿದೆ ಎಂದರು.
ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ವಿಶ್ಲೇಷಣೆ ಮಾಡುವುದರ ಜೊತೆಗೆ ಮುಂದಿನ ವರ್ಷದ ಶೈಕ್ಷಣಿಕ ಕ್ರಿಯಾ ಯೋಜನೆಯನ್ನು ತಯಾರಿಸಿಕೊಳ್ಳುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಸೇರಿದಂತೆ ಜಿಲ್ಲೆಯ 120ಕ್ಕೂ ಹೆಚ್ಚು ಅನುಪಾಲನಾಧಿಕಾರಿಗಳು ಭಾಗವಹಿಸಿದ್ದಾರೆ.
ಜಿಲ್ಲಾ ಹಂತದಲ್ಲಿ ಡಯಟ್ನ ಎಲ್ಲಾ ಹಿರಿಯ-ಕಿರಿಯ ಉಪನ್ಯಾಸಕರು, ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಉಪ ಯೋಜನಾ ಸಮನ್ವಯಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ಬಿ.ಇ.ಒ, ಬಿ.ಆರ್.ಸಿ, ಇ.ಸಿ.ಒ, ಬಿ.ಆರ್.ಪಿ ಹಾಗೂ ಸಿ.ಆರ್.ಪಿ. ಯವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.
ಸರ್ಕಾರವು ಪ್ರತಿ ವರ್ಷ ಸರ್ಕಾರಿ ಶಾಲೆಗೆ ಬರುವ ಪ್ರತಿಯೊಂದು ಮಗುವಿನ ಮೇಲೆ ಸುಮಾರು 22,000 ರೂ.ಗಳನ್ನು ವಿನಿಯೋಗಿಸುತ್ತಿದೆ: ಜಿಪಂ ಸಿಇಒ ಮೋನಾ ರೋತ್



