ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಿಂದ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಿಗ್ಗೆ 8-30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ಥಂಭವನ್ನು ಲೋಕಾರ್ಪಣೆ ಮಾಡಿ, ಪ್ರಪ್ರಥಮ ಬಾರಿಗೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಸಂವಿಧಾನದ ಆಶಯಗಳಾದ ದೇಶ ಪ್ರೇಮ, ದೇಶ ಭಕ್ತಿ, ಸೋದರತೆ ಮತ್ತು ಸಾಮರಸ್ಯವನ್ನು ಉಳಿಸಿ ಬೆಳೆಸಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುವ ಈ ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಪ್ರಾರಂಭಕ್ಕೆ ಮುನ್ನ, ಬೆಳಿಗ್ಗೆ 7-30 ಗಂಟೆಗೆ, ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವಾದ್ಯಗೋಷ್ಠಿ-ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿವೆ.ಸಮಾರಂಭದ ನಂತರ, ಬೆಳಿಗ್ಗೆ 10-00 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಫ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಅರ್ಬುದ ರೋಗ ( ಕ್ಯಾನ್ಸರ್ ) ಉಚಿತ ತಪಾಸಣಾ ಶಿಬರವನ್ನೂ ಆಯೋಜಿಸಲಾಗಿದೆ.
ಸಂಜೆ 6-30 ಗಂಟೆಗೆ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದವರು ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ, ಲೇಸರ್ ಷೋ ಪ್ರದರ್ಶನವನ್ನೂ ಆಯೋಜಿಸಲಾಗಿದೆ.