ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಖತರ್ನಾಕ್ ಪತ್ನಿ ಸೇರಿ ಇಬ್ಬರನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.ನಂದಿನಿಬಾಯಿ ಮತ್ತು ನಿತೀಶ್ ಕುಮಾರ್ ಬಂಧಿತ ಆರೋಪಿಗಳು. ವೆಂಕಟ್ ನಾಯಕ್(30) ಕೊಲೆಯಾದವರು.
ಕಳೆದ ಜ.9ರಂದು ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಆರೋಪಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ತನ್ನ ಪತಿ ವೆಂಕಟ್ ನಾಯಕ್ ತಲೆ ಮೇಲೆ ರುಬ್ಬುವ ಗುಂಡು ಹಾಕಿ ಕೊಲೆ ಮಾಡಿದ್ದು ಆರೋಪಿಗಳು ಗಂಡ ಮನೆಯಲ್ಲಿ ಇಲ್ಲ ಎಂದು ಹೇಳಿ ನಂದಿನಿ ಬಾಯಿ ಜ.9 ರಂದು ಪ್ರಿಯಕರ ನಿತೇಶ್ನನ್ನು ಹೆಚ್ಎಸ್ಆರ್ ಲೇಔಟ್ನ ತನ್ನ ಮನೆಗೆ ಕರೆಸಿಕೊಂಡಿದ್ದಳು.
ಈ ವೇಳೆ ಗಂಡ ವೆಂಕಟನಾಯಕ್ ಧಿಡೀರ್ ಮನೆಗೆ ಬಂದಿದ್ದ. ಮನೆಗೆ ಕಾಲಿಡುತ್ತಿದ್ದಂತೆ ರೂಮ್ನಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಆತ್ಮೀಯ ಸಲುಗೆಯಲ್ಲಿದ್ದದನ್ನು ಕಂಡು ಕೋಪಗೊಂಡಿದ್ದ. ಬಳಿಕ ಪತಿ-ಪತ್ನಿ ನಡುವೆ ಗಲಾಟೆಯಾಗಿದ್ದು ಜಗಳ ತಾರಕ್ಕಕ್ಕೇರಿ ಕೊಲೆ ನಡೆದಿದೆ. ನಂದಿನಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಸೇರಿ ವೆಂಕಟನಾಯಕ್ನ ತಲೆ ಮೇಲೆ ರುಬ್ಬುವ ಗುಂಡು ಎತ್ತಾಕಿ ಕೊಲೆ ಮಾಡಿದ್ದಾರೆ.
ಪತಿಯನ್ನು ಕೊಂದ ಬಳಿಕ ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಹೃದಯಾಘಾತವೆಂದು ಬಿಂಬಿಸಲು ಯತ್ನಿಸಿದ್ದಾರೆ. ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿದ್ದಾರೆ. ನಂತರ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ನಂದಿನಿ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಬಯಲಾಗಿದೆ. ಪೊಲೀಸರಿಗೂ ಸ್ಥಳ ಪರಿಶೀಲನೆ ವೇಳೆ ಕೊಲೆ ಎಂಬುದಾಗಿ ಅನುಮಾನ ಬಂದಿತ್ತು. ಪೊಲೀಸರಿಗೆ ನಂದಿನಿ ಮೇಲೆ ಅನುಮಾನ ವ್ಯಕ್ತವಾಗಿ ನಿಗಾ ಇಟ್ಟಿದ್ದು. ಮರಣೋತ್ತರ ವರದಿ ಬಂದ ಬಳಿಕ ನಂದಿನಿಯನ್ನ ವಿಚಾರಿಸಿದಾಗ ನನ್ನ ಗಂಡನನ್ನು ಕಳೆದಕೊಂಡಿದ್ದೀನಿ ಅಂತ ನಾಟಕವಾಡಿದ್ದಳು. ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾಳೆ.